ಶಿವಶರಣ ರಕ್ಷಕ, ಅನುಭವ ಮಂಟಪ ಅಧ್ಯಕ್ಷರು, ಕಾಲಜ್ಞಾನಿ
ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಯೋಗಿಗಳು ಸಂಸ್ಥಾನ ಗವಿಮಠ ಬಸವಕಲ್ಯಾಣ
ರುದ್ರಮುನಿಯ ಚರಿತ್ರೆ — ಪಠ್ಯ ಹಾಗೂ ವಿವರಣೆ
ಈ ಪಠ್ಯವು 'ಶಿವಾನುಭವ' ಕನ್ನಡ ಮಾಸಪತ್ರಿಕೆಯ ಮೇ–ಜೂನ್ ೧೯೨೯ (ಸಂಪುಟ ೧೩, ಸಂಚಿಕೆ ೯-೯) ಸಂಚಿಕೆಯಲ್ಲಿ ಪ್ರಕಟವಾದ "ರುದ್ರಮುನಿಯ ಚರಿತ್ರೆ" ಲೇಖನದಿಂದ ಆಯ್ದ ಪುಟಗಳಾಗಿವೆ. ಇದರ ಲೇಖಕರು ರಾವ್ ಸಾಹೇಬ್ ಫ. ಗು. ಹಳಕಟ್ಟಿ (ಬಿ.ಎ., ಎಲ್.ಎಲ್.ಬಿ.).
೧. ಪಠ್ಯದ ಸಂಪೂರ್ಣ ವಿವರಣೆ
ಈ ಲೇಖನದಲ್ಲಿ ವೀರಶೈವ ಶರಣ ಹಾಗೂ ಮಹಾಪುರುಷರಾದ ರುದ್ರಮುನಿ ಶಿವಯೋಗಿಗಳ ಜೀವನ, ಅವರ ಸಾಧನೆ, ಕಲ್ಯಾಣದ ಕ್ರಾಂತಿಯ ಸಮಯದಲ್ಲಿ ಅವರು ವಹಿಸಿದ ಪಾತ್ರ ಹಾಗೂ ವೀರಶೈವ ಧರ್ಮ ರಕ್ಷಣೆಗೆ ನೀಡಿದ ಕೊಡುಗೆಯನ್ನು ಐತಿಹಾಸಿಕವಾಗಿ ವಿಶ್ಲೇಷಿಸಲಾಗಿದೆ. ಜನನ ಮತ್ತು ಪ್ರಭಾವ: ರುದ್ರಮುನಿಯು ರೇವಣಸಿದ್ಧೇಶ್ವರ ಹಾಗೂ ಚಾಮಲದೇವಿಯ ಮಗ. ರೇವಣಸಿದ್ಧರು ವಿಜಾಪುರ (ತರ್ದವಾಡಿ) ನಾಡಿನಲ್ಲಿ ಇದ್ದಾಗ 'ಸಿದ್ಧನಕೆರೆ' ಎಂಬ ಕೆರೆಯನ್ನು ಕಟ್ಟಿಸುವ ಸಂದರ್ಭದಲ್ಲಿ ರುದ್ರಮುನಿ ಜನಿಸಿದರು. ದೀಕ್ಷೆ ಮತ್ತು ಪಂಚಕಲಶ ಸ್ಥಾಪನೆ: ಹರಿಹರ ಕವಿಯ 'ರಗಳೆ' ಹಾಗೂ 'ಹಾವಿನಹಾಳ ಕಲ್ಲಯ್ಯನ ರಗಳೆ'ಯ ಪ್ರಕಾರ, ರೇವಣಸಿದ್ಧರೇ ತಮ್ಮ ಮಗನಾದ ರುದ್ರಮುನಿಗೆ ಶೈವೋಪದೇಶ ಹಾಗೂ ದೀಕ್ಷೆಯನ್ನು ನೀಡಿದರು. ನಂತರ ರುದ್ರಮುನಿಯು 'ಪಂಚಕಲಶ ಸ್ಥಾಪನೆ' ನೆರವೇರಿಸಿ ಹಾವಿನಹಾಳ ಕಲ್ಲಯ್ಯನಿಗೆ ಶಿವದೀಕ್ಷೆ ಹಾಗೂ ಶಿವಪಟ್ಟವನ್ನು ನೀಡಿದರು. ಶಿವಾನುಭವ ಮಂಟಪ ಹಾಗೂ ಕಲ್ಯಾಣ: ಆರಂಭದಲ್ಲಿ ಬಸವಣ್ಣನವರ ಕಲ್ಯಾಣದ 'ಶಿವಾನುಭವ ಮಂಟಪ'ದ ಧಾರ್ಮಿಕ ಚರ್ಚೆಗಳಲ್ಲಿ ರುದ್ರಮುನಿ ಭಾಗವಹಿಸಿರಲಿಲ್ಲ. ಆದರೆ ನಂತರ ಅವರು ಕಲ್ಯಾಣಕ್ಕೆ ಬಂದು 'ಚಂಗಣಗಿಲ ಮಂಟಪ' ಎಂಬ ತಮ್ಮದೇ ಆವಾಸಸ್ಥಾನದಲ್ಲಿದ್ದು ತಪಸ್ಸಿನಲ್ಲಿ ತೊಡಗಿಸಿಕೊಂಡರು. ಕಲ್ಯಾಣದ ಕ್ರಾಂತಿ ಮತ್ತು ಶರಣರ ರಕ್ಷಣೆ: ಬಿಜ್ಜಳನ ಕೊಲೆ ಮತ್ತು ಕಲ್ಯಾಣದಲ್ಲಾದ ಸಾಮಾಜಿಕ-ರಾಜಕೀಯ ಘರ್ಷಣೆಯ ನಂತರ, ಶರಣರು ಸಂಕಟದಲ್ಲಿದ್ದಾಗ ರುದ್ರಮುನಿಯು ಚನ್ನಬಸವಣ್ಣ, ಮಡಿವಾಳ ಮಾಚಿದೇವ, ಕಿನ್ನರಿ ಬ್ರಹ್ಮಯ್ಯ ಮುಂತಾದ ಶರಣರಿಗೆ ಆಸರೆಯಾಗಿ ನಿಂತರು. ೧೨,೭೭೦ ಶರಣರು ಒಗ್ಗೂಡಿ ಉಳಿವೆಯ ಕಡೆಗೆ ಪ್ರಯಾಣ ಬೆಳೆಸಲು ಪ್ರೇರಣೆ ನೀಡಿದರು. ಶ್ರೀಶೈಲಕ್ಕೆ ಪ್ರಯಾಣ ಹಾಗೂ ಸಂಸ್ಥಾನ: ಉಳಿವೆಯ ಸಂಘರ್ಷದ ಬಳಿಕ, ರುದ್ರಮುನಿಯು ಶ್ರೀಶೈಲಕ್ಕೆ ತೆರಳಿ ವೀರಶೈವ ಧರ್ಮದ ಪುನರುತ್ಥಾನ ಮಾಡಿದರು. ಅಲ್ಲಿ ಮುಕ್ತಿಮುನಿಗೆ ಪಟ್ಟವನ್ನು ಕಟ್ಟಿ, ಧರ್ಮ ಪ್ರಚಾರದ ಕಾರ್ಯವನ್ನು ಮುಂದುವರಿಸಿದರು. ನಂತರ ಕಲ್ಯಾಣಕ್ಕೆ ಮರಳಿ ಸಮಾಧಿಸ್ಥರಾದರು. ಬಾಳೇಹಳ್ಳಿ ಶ್ರೀರಂಭಾಪುರಿ ಸಿಂಹಾಸನ ಸಂಬAಧ: ಬಾಳೇಹಳ್ಳಿ (ರಂಭಾಪುರಿ) ಪೀಠದ ಬಿರುದಾವಳಿಯಲ್ಲಿ ರುದ್ರಮುನಿ ಮತ್ತು ದಿಗಂಬರ ಮುಕ್ತಿಮುನಿ ಅವರ ಹೆಸರುಗಳು ಉಲ್ಲೇಖವಾಗುವುದರಿಂದ, ಇವರು ಆ ಪೀಠದ ಪೂರ್ವಾಚಾರ್ಯರೆಂದು ಸ್ಪಷ್ಟವಾಗುತ್ತದೆ.
೨. ಪುಟವಾರು ವಾಚನ [ಪುಟ ೧] (ಪುಟ ೩೨೪) ಶಿವಾನುಭವ - ವರ್ಷ ೧೨ | ಮೇ-ಜೂನ್ ೧೯೨೯ | ಸಂಚಿಕೆ ೯-೯
ರುದ್ರಮುನಿಯ ಜನನ: ರುದ್ರಮುನಿಯು ರೇವಣಸಿದ್ಧೇಶ್ವರನ ಮಗನು. ರೇವಣಸಿದ್ಧೇಶ್ವರನು ಕಂಚಿ ಪಟ್ಟಣದಲ್ಲಿದ್ದಾಗ್ಗೆ ಅವನು ಚೋಳ ರಾಜನ ಪುತ್ರಿಯನ್ನು ಲಗ್ನವಾಗಿದ್ದನೆಂಬ ಐತಿಹ್ಯವಿದ್ದು ರುದ್ರಮುನಿಯು ಆಕೆಯಿ೦ದ ಉದಯಿಸಿ ಮುಂದೆ ಬಹು ಪ್ರಖ್ಯಾತನಾದನು. ರೇವಣಸಿದ್ಧೇಶ್ವರನು ತರ್ದವಾಡಿ (ವಿಜಾಪುರ) ನಾಡಿನಲ್ಲಿ ವಾಸಿಸುತ್ತಿದ್ದಾಗ್ಗೆ ಇಲ್ಲಿಯೋ ರುದ್ರಮುನಿಯು ಜನಿಸಿದನೆಂದು ತೋರುತ್ತದೆ. ಇಲ್ಲಿ ರೇವಣಸಿದ್ಧನು ಸಿದ್ಧನಕೆರೆ ಎಂಬ ಕೆರೆಯನ್ನು ಕಟ್ಟಿಸುತ್ತಿರುವಾಗ ಆತನು ಅಲ್ಲಿ ಉದಯವಾದನು. ಈ ಎಲ್ಲ ಸಂಗತಿಗಳನ್ನು ನಾನು ರೇವಣಸಿದ್ಧೇಶ್ವರನ ಚರಿತ್ರೆಯನ್ನು ಬರೆಯುವಲ್ಲಿ ಶಿವಾನುಭವ ಸಂಚಿಕೆ ೫ ಇದರಲ್ಲಿ ಚರ್ಚಿಸಿದ್ದೇನೆ. ರೇವಣಸಿದ್ಧೇಶ್ವರನ ಚರಿತ್ರೆಯನ್ನು ಮಹಾಕವಿ ಹರಿಹರನು ತನ್ನ ರಗಳೆಯಲ್ಲಿ ಬರೆದಿದ್ದಾನೆ. ಅವನ ಸೋದರ ಅಳಿಯನಾದ ರಾಘವಾಂಕನು ಸಹ ತನ್ನ ಸಿದ್ಧರಾಮೇಶ್ವರ ಪುರಾಣದಲ್ಲಿಯೂ ಅವನ ಬಗ್ಗೆ ಉಲ್ಲೇಖಿಸಿದ್ದಾನೆ (೧ ನೇ ಸಂಧಿ-ಶ್ಲೋಕ ೩೪ ರಿಂದ ೩೫ ನೋಡಬೆಕು). ರಾಘವಾಂಕನು ಅವನ ವಿಷಯವಾಗಿ ಅದರಲ್ಲಿ ವಿವರಿಸುವುದೇನೆಂದರೆ:— “ರೇವಣಸಿದ್ಧನು ಸಿದ್ಧಕುಲಚಕ್ರೇಶ್ವರನೆನಿಸಿಕೊಂಡು ಅಪ್ರತಿಮ ಗುರುವಾಗಿ ಸೊನ್ನಲಾಪುರದ ಊರ ಸೀಮೆಯಲ್ಲಿ ಬಂದಿಳಿದನು. ಅವನು ಆ ಪಟ್ಟಣದಲ್ಲಿ... [ಪುಟ ೨] (ಪುಟ ೩೨೫) ಬರುವ ಪೂರ್ವದಲ್ಲಿ ತನ್ನ ಹಾವುಗೆಗಳನ್ನು ಬದಿಗಿಟ್ಟು ಪಟ್ಟಣವನ್ನು ನಮಸ್ಕರಿಸಿ ಪುಳುಕಿತನಾಗಲು ಅವನ ಶಿಷ್ಯರು ಅವನನ್ನು ಕುರಿತು "ಇಲ್ಲಿ ಯಾವ ಮಹತ್ವದ ದೇವಗೃಹಗಳಿಲ್ಲ, ತೀರ್ಥಗಳಿಲ್ಲ, ಇಂಥಲ್ಲಿ ನೀವು ಹೀಗೇಕೆ ವರ್ತಿಸಿದಿರೆಂದು" ಕೇಳಲು, "ಇಲ್ಲಿ ಒಬ್ಬ ಶಿವಸಿದ್ಧನು ಜನಿಸುವನು. ಆತನಿಂದ ಇದು ಲಿಂಗದ ಬೀಡಾಗುವದು, ಸಿರಿಗೆ ಮನೆಯಾಗುವದು, ಮುಕ್ತಿಗೆ ಕ್ಷೇತ್ರವಾಗುವದು, ಹೀಗೆ ಈ ಸೊನ್ನಲಿಗೆಯು ಮೆರೆಯುವದು” ಎಂದು ತಿಳಿಸಿದನು. ಈ ಪ್ರಕಾರ ರಾಘವಾಂಕನು ತನ್ನ ಚರಿತ್ರೆಯಲ್ಲಿ ರೇವಣಸಿದ್ಧನ ವಿಷಯವಾಗಿ ಬರೆದಿರುತ್ತಾನೆ. ಇದೇ ಸಂದರ್ಭವನ್ನು ಹರಿಹರನು ತನ್ನ ರೇವಣಸಿದ್ಧೇಶ್ವರನ ರಗಳೆಯಲ್ಲಿಯೂ ವರ್ಣಿಸಿ ರುದ್ರಮುನಿಯ ಬಗ್ಗೆ ಸಹ ಉಲ್ಲೇಖಿಸಿದ್ದಾನೆ.
ಅದ ಹೇಗೆಂದರೆ:—
ಎಂದೊಲಿದು ನಡೆತಂದು ಮುದ್ದು ಗೌಡನ ಮನೆಗೆ
ನಿಂದು ಭಿಕ್ಷೆಯನಾಂತು ಕೈಕೊಂಡು ಕೃಪೆ ಬೆಳಗೆ
ಸುಗ್ಗ ಗೌಡಿಯ ಮೆರೆವ ಪುಣ್ಯದರಮನಲ್ಲಿ
ಅಗ್ಗಿ ಸುತ್ತಂ ಮುಟ್ಟಿ ಭಸಿತಮಂ ಇಡುತಲ್ಲಿ
ಸೇನೆಯಂ ರುದ್ರಮುನಿದೇವರಂ ನೋಡುತಂ
ಮಾನಿ ಚಾಮಲದೇವಿಗಾಗಳ ಸುತಂ
ಎ0ದು ಹೇಳುತ್ತಾನೆ.
ಮುಂದೆ ರೇವಣಸಿದ್ಧನು ಸೊಲ್ಲಾಪುರದಿಂದ ಆಕಾಶ ಮಾರ್ಗದಿಂದ ಕೊಲ್ಲಿಪಾಕಿಗೆ ಹೋಗಿ ಸೋಮನಾಥನಲ್ಲಿ ಐಕ್ಯನಾಗುತ್ತಾನೆ. ಇದರ ಮೇಲಿಂದ ರೇವಣಸಿದ್ಧೇಶ್ವರನು ಸೊನ್ನಲಿಗೆಯಲ್ಲಿ ರುದ್ರಮುನಿಯೊಡನೆ ಬಂದಿದ್ದನೆAದು ತಿಳಿಯುತ್ತದೆ.
ರುದ್ರಮುನಿಗೆ ಶೈವಾಚಾರ್ಯ ಸ್ಥಾನ : ರೇವಣಸಿದ್ಧೇಶ್ವರನು ಮಂಗಳವಾಡದಲ್ಲಿ ಇದ್ದಾಗ್ಗೆ ರುದ್ರಮುನಿಯು ಅತ್ಯಂತ ಜ್ಞಾನಿಯಾಗಿ ಉನ್ನತ ಸ್ಥಾನವನ್ನು ಪಡೆದಿದ್ದನೆಂದು ತೋರುತ್ತದೆ. ರೇವಣಸಿದ್ಧೇಶ್ವರನು ರುದ್ರಮುನಿಗೆ ೮ನೇ ವರ್ಷದಲ್ಲಿ ಶೈವೋಪದೇಶವನ್ನು ತಾನೇ ಕರುಣಿಸಿ ಅವನಿಗೆ ಪರಮ ಸ್ವರೂಪ ಜ್ಞಾನವನ್ನು ಬೆಸಸುತ್ತಿದ್ದನೆಂದು ಹರಿಹರನು ತನ್ನ ರಗಳೆಯಲ್ಲಿ ಹೇಳಿದ್ದಾನೆ. [ಪುಟ ೩] (ಪುಟ ೩೨೬) (ಪುಟ ೩೬ ನೋಡಿರಿ) ಮತ್ತು ಅವನು ಹಾವಿನಹಾಳ ಗ್ರಾಮಕ್ಕೆ ಹೋದ ಕಾಲದಲ್ಲಿ ಅಲ್ಲಿಯೂ ರುದ್ರಮುನಿಯ ವಿಷಯವು ಬರುತ್ತದೆ. ಆಗ ಅಲ್ಲಿಯ ಕಲ್ಲಯ್ಯನು ತನಗೆ ಉಪದೇಶ ಮಾಡಲು ಕೇಳಿಕೊಳ್ಳಲು ರೇವಣಸಿದ್ಧನು ಹೇಳಿದ್ದು ಏನೆಂದರೆ:—
ಏಕಯ್ಯ ನಿನ್ನಯ ಮನೋರಥವನೀವೇನೆ
ಎಳ್ಳು ಕೈಮುಗಿದಿರ್ದ ಕಲ್ಲಯ್ಯನಂ ಕಂಡು
ತಾಳ್ಮೆ ಕಾರುಣ್ಯವಂ ಭಕ್ತಿಗೆ ಮನಂಗೊAಡು
ರುದ್ರಮುನಿದೇವಸಿಂ ಕರುಣಮಂ ಮಾಡಿಸುತೆ
ರುದ್ರಗಣಗಂ ಶೈವದೀಕ್ಷೆಯಂ ನೀಡಿಸುತೆ (ಪುಟ ೪೦)
ಈ ಪ್ರಕಾರ ರೇವಣಸಿದ್ಧೇಶ್ವರನು ತನ್ನ ಮಗ ರುದ್ರಮುನಿಯಿಂದಲೇ ಹಾವಿನಹಾಳ ಕಲ್ಲಯ್ಯನಿಗೆ ಶಿವದೀಕ್ಷೆಯನ್ನು ಕೊಡಿಸಿದನೆಂದು ಇಲ್ಲಿ ಹೇಳಲ್ಪಟ್ಟಿದೆ. ಹಾವಿನಹಾಳ ಕಲ್ಲಯ್ಯನ ರಗಳೆಯಲ್ಲಿಯೂ ರುದ್ರಮುನಿಯ ವರ್ಣನೆಯು ಇದೇ ಪ್ರಕಾರ
ಇದೆ. ಅದು ಹೇಗೆಂದರೆ:—
ಸಿದ್ಧರೇವಣದೇವನ ಮಗನೆಂದೆನಿಸಿರ್ದ
ಉದ್ದತಜ್ಞಾನಿಸಿ ಶೈವಾಚಾರ್ಯನೆನಿಸಿರ್ದ
ರುದ್ರದೇವಂ ಸಿನಗೆ ಗುರುವಾಗಿ ಸಂದಪA
ಭವಗುಣನಾನಂದದಿAದಲ್ಲಿ ಬಂದಪA (ಪುಟ ೨೫)
ಈ ಪ್ರಕಾರ ರುದ್ರಮುನಿಯು ಉದ್ದಂಡ ಜ್ಞಾನಿಯೂ ಶೈವಾಚಾರ್ಯನೂ ಆಗಿದ್ದನೆಂದು ಇಲ್ಲಿ ವರ್ಣಿಸಲ್ಪಟ್ಟಿರುತ್ತಾನೆ. ಮುಂದೆ ಪುಟ ೨೪ರಲ್ಲಿ ಕಲ್ಲಯ್ಯನು ತನಗೆ ಒಬ್ಬ ಗುರುವನ್ನೂ ಕರುಣಿಸಬೇಕೆಂದು ಕೇಳಿಕೊಳ್ಳಲು,
ರೇವಣಸಿದ್ಧನು:—
ಮುಂದಿರ್ದ ರುದ್ರಮುನಿದೇವರಂ ಪರೀಕ್ಷಿಸುತೆ
ಮಗನೆ ಕಲ್ಲಯ್ಯಂಗೆ ಗುರುವಾಗಿ ಹೋಗಯ್ಯ
ಬಗೆಗೆ ವೆಗ್ಗಳವಾದ ಮಾಯೆಯಂ ನೀಗಯ್ಯ [ಪುಟ ೪] (ಪುಟ ೩೨೭/೩೩೦)
ಎಂದಲ್ಲಿ ರುದ್ರಮುನಿದೇವರಂ ಕಳಿಸುತಿರೆ
ಬಂದನಾ ಕಲ್ಲಿನಾಥಂ ಮನದೊಳೆಳಿಸುತ್ತಿರೆ
ಆಗ ರುದ್ರಮುನಿಯು ಪಂಚಕಲಶಸ್ಥಾಪನೆಯನ್ನು ಮಾಡಿ ಕಲ್ಲಯ್ಯನಿಗೆ ದೀಕ್ಷೆಯನ್ನು ಕೊಡುತ್ತಾನೆ. ಅದು ಹೇಗೆಂದರೆ:—
ರಂಗಮAಟಪದೊಳಗೆ ಶಿವಕಲಶಮುಮನಿರಿಸಿ
ಪಿಂಗದೊಲವಿA ಪಂಚಶುದ್ಧಿಯA ಸಂಗಡಿಸಿ
ಸುರುಚಿರವಿಭೂತಿಯಂ ಶಿವಪಟ್ಟಮಂ ಕಟ್ಟಿ
ಶರಣಸಂತತಿಯೊಲ್ಲು ಸಂತೋಷಮA ಮುಟ್ಟಿ
ಗುರುಕಲಶದೊಡನೆ ಶಿವಕಲಶಂಗಳA ಪಿಡಿದು
ಪರಮಾನುರಾಗದಿಂ ಕಲಶೋದಕವನೆರೆದು
ಇಂತು ಗುರುರುದ್ರಮುನಿದೇವ ಬಿಜಯಂಗೆಯ್ಯ
ಪಿಂತೆ ಕಲ್ಲಯ್ಯನಾ ಶೈವರಾಜ್ಯಂಗೆಯ್ಯ
ಗುರುಹಸ್ತದಿಂ ಪಿಡಿಯೆ ಲಘುವಳಿದು ಗುರುವಾಗಿ
ಉರುತರಜ್ಞಾನಮಯನಾಗಿ ಸುಖತರವಾಗಿ (ಪುಟ ೨೭)
ಈ ಪ್ರಕಾರ ಪಂಚಕಲಶ ವಿಧಾನಪೂರ್ವಕವಾಗಿ ರುದ್ರಮುನಿಯು ಹಾವಿನಹಾಳ ಕಲ್ಲಯ್ಯನಿಗೆ ದೀಕ್ಷೆಯನ್ನು ಕೊಡುತ್ತಾನೆ. ಇಲ್ಲಿ ಪಂಚಕಲಶಗಳು ಈಶ್ವರನ ಪಂಚಮುಖಗಳೆAದು ವರ್ಣಿಸಲ್ಪಟ್ಟಿವೆ. ಈ ಪ್ರಕಾರ ರುದ್ರಮುನಿಯು ರೇವಣಸಿದ್ಧೇಶ್ವರನಿರುವಾಗಲೇ ಮಹತ್ವದ ಸ್ಥಾನವನ್ನು ಹೊಂದಿದ್ದನೆAದು ತಿಳಿಯುತ್ತಿದೆ. ಅವನು ರೇವಣಸಿದ್ಧೇಶ್ವರನೊಡನೆ ತರ್ದವಾಡಿ ಸೀಮೆಯಲ್ಲಿ ಬಹು ದಿವಸಗಳ ವರೆಗೆ ವಾಸ ಮಾಡಿರಲಿಕ್ಕೆ ಬೇಕು. ಮತ್ತು ಅವನೊಡನೆ ಇಲ್ಲಿ ಆಗಿಂದಾಗ್ಗೆ ಸಂಚಾರ ಮಾಡುತ್ತಿರಲಿಕ್ಕೆ ಬೇಕು. ಮತ್ತು ಶೈವಾಚಾರ್ಯನೆಂತಲೂ ಇಲ್ಲಿ ಪ್ರಸಿದ್ಧಿ ಹೊಂದಿದನು. ಆದರೆ ರುದ್ರಮುನಿಯು ರೇವಣಸಿದ್ಧೇಶ್ವರನೊಡನೆ ಕೊಲ್ಲಿಪಾಕಕ್ಕೆ ಹೋಗದೆ ತರ್ದವಾಡಿ ಸೀಮೆಯಲ್ಲಿಯೇ ಉಳಿದನು. ಅವನು ಬಹುಶಃ ಮಂಗಳವಾಡ ಅಥವಾ ಸೊಲ್ಲಾಪುರ ಈ ಪಟ್ಟಣಗಳಿದ್ದ ಸೀಮೆಯಲ್ಲಿಯೇ ವಾಸವಾಗಿದ್ದನು. [ಪುಟ ೫] (ಪುಟ ೩೩೧)
ರುದ್ರಮುನಿ ಮತ್ತು ಶಿವಾನುಭವ ಮಂಟಪ:
ಆಮೇಲೆ ಕೆಲವು ವರ್ಷಗಳಲ್ಲಿಯೇ ಬಸವೇಶ್ವರನು ಕಲ್ಯಾಣ ಪಟ್ಟಣದಲ್ಲಿ ಕಲಚೂರ್ಯ ರಾಜನಾದ ಬಿಜ್ಜಳನಲ್ಲಿ ಮಂತ್ರಿಪದವನ್ನು ಹೊಂದಿ ವಿಖ್ಯಾತನಾದನು. ಇಷ್ಟರಲ್ಲಿಯೇ ಬಳ್ಳಿಗಾವಿ, ಶ್ರೀಶೈಲ ಮೊದಲಾದ ಸ್ಥಳಗಳಲ್ಲಿ ಬಹು ಕಡೆಗೆ ವೀರಶೈವ ಮತೋದ್ದಾರ ಕಾರ್ಯಗಳು ಅನೇಕ ಶರಣರಿಂದ ಬಲವಾಗಿ ನಡೆಸಲ್ಪಟ್ಟಿದ್ದವು. ಬಸವೇಶ್ವರನು ರೇವಣಸಿದ್ಧ, ಪ್ರಭುದೇವ, ಇವರಂತೆ ಧರ್ಮಬೋಧೆ ಮಾಡುತ್ತ ಕಲ್ಯಾಣ ಪಟ್ಟಣವನ್ನು ಬಿಟ್ಟು ಸಂಚರಿಸಿದAತೆ ಎಲ್ಲಿಯೂ ಉಲ್ಲೇಖವಿಲ್ಲ. ಆದುದರಿಂದ ಅವನು ಮಂತ್ರಿಪದವನ್ನು ಹೊಂದುವ ಪೂರ್ವದಲ್ಲಿಯೇ ಶೈವ ಧರ್ಮದ ಚಳವಳಿಯನ್ನು ಬಹುಕಡೆಗೆ ಶಿವಶರಣರು ಜರಗಿಸುತ್ತ ಬಂದಿದ್ದರೆAದು ಊಹಿಸಬೇಕಾಗುತ್ತದೆ. ಅವರು ಬಹು ಕಡೆಗೆ ಅನೇಕರಾಗಿ ಉದ್ಭವಿಸಿದ್ದರೆಂದು ತೋರುತ್ತದೆ. ಬಸವೇಶ್ವರನು ಒಂದು ಬಲಿಷ್ಠ ರಾಜ್ಯದಲ್ಲಿ ಶ್ರೇಷ್ಠ ಸ್ಥಾನವನ್ನು ಹೊಂದಿದ ಕೂಡಲೆ ಈ ಶಿವಶರಣರಲ್ಲನೇಕರು ಕಲ್ಯಾಣಕ್ಕೆ ಆಗಮಿಸಿದರೆಂದು ತೋರುತ್ತದೆ. ಇವರು ಅಲ್ಲಿ ಏಕೀಕೃತವಾದ ಬಳಿಕ ಅಲ್ಲಿ ಒಂದು ಶಿವಾನುಭವ ಮಂಟಪವು ಸ್ಥಾಪಿತವಾಯಿತು. ಅಲ್ಲಿ ಶಿವಶರಣರು ನೆರೆದು ಧಾರ್ಮಿಕ ತತ್ವಗಳನ್ನು ಚರ್ಚಿಸುತ್ತ ವೀರಶೈವ ಧರ್ಮದಲ್ಲಿ ಒಂದು ಸುವ್ಯವಸ್ಥೆಯನ್ನುಂಟು ಮಾಡಿದಂತೆ ತೋರುತ್ತದೆ. ಆದರೆ ರುದ್ರಮುನಿಯು ಈ ಶಿವಾನುಭವ ಮಂಟಪದ ಚರ್ಚೆಗಳಲ್ಲಿದ್ದುದು ತೋರಿಬರುವದಿಲ್ಲ. ಅವನು ಈ ಕಾಲದಲ್ಲಿ ಬಹುಶಃ ತದ್ದೇವಾಡಿ ಭಾಗದಲ್ಲಿಯೇ ವಾಸಿಸುತ್ತಿರಬಹುದು. ಬಸವೇಶ್ವರನು ಕಲ್ಯಾಣ ಪಟ್ಟಣದಲ್ಲಿದ್ದಾಗ ಉಂಟಾದ ಧರ್ಮ ಜಾಗ್ರತಿಯ ಕಾರ್ಯಗಳಲ್ಲಿ ಅವನ ಉಲ್ಲೇಖಗಳು ದೊರೆಯುವದಿಲ್ಲ. ಆದುದರಿಂದ ಅವನು ಆಗ ಕಲ್ಯಾಣಕ್ಕೆ ಬಂದಿರಲಿಲ್ಲೆAಬ ಅನುಮಾನವು ಉಂಟಾಗುತ್ತದೆ.
ಶಿವಶರಣರಿಗೆ ರುದ್ರಮುನಿಯ ಸಹಾಯ:
ಆದರೆ ಮುಂದೆ ಶಿವಶರಣರಿಗೂ ಬಿಜ್ಜಳನಿಗೂ ವಿರೋಧಗಳು ಉತ್ಪನ್ನವಾದವು. ಕಲ್ಯಾಣ ಪಟ್ಟಣದಲ್ಲಿ ಭೀಕರಸ್ಥಿತಿಯು ಉಂಟಾಯಿತು. ಬಸವೇಶ್ವರ, ಪ್ರಭುದೇವ, ಮಹಾದೇವಿಯಕ್ಕ ಮೊದಲಾದ ಶಿವಶರಣರು ಕಲ್ಯಾಣ ಪಟ್ಟಣವನ್ನು ಬಿಟ್ಟು ಶ್ರೀಶೈಲ ಮೊದಲಾದ... [ಪುಟ ೬] (ಪುಟ ೩೩೨) ಕಡೆಗೆ ತೆರಳಿದರು. ಈ ಸ್ಥಿತಿಯಲ್ಲಿ ಚನ್ನಬಸವನ, ಮಡಿವಾಳ ಮಾಚಿದೇವ, ಕಿನ್ನರಿ ಬ್ರಹ್ಮಯ್ಯ ಇವರೇ ಕೆಲವರು ಮುಖ್ಯಸ್ಥರಾಗಿ ಹಿಂದೆ ಉಳಿಯುವ ಪ್ರಸಂಗವು ಬಂದಿತು. ಇಂಥ ಕಠಿಣ ಕಾಲದಲ್ಲಿ ರುದ್ರಮುನಿಯು ಮುಂದುವರಿದನು. ಮತ್ತು ಚನ್ನಬಸವಾದಿಗಳಿಗೆ ಸಹಾಯ ಕನಾಗಿ ನಿಂತನು. ಆ ಕಾಲಕ್ಕೆ ಅವನು ಮಾಡಿದ ಸಹಾಯವೂ ಸಾಹಸ ಕಾರ್ಯಗಳೂ ವರ್ಣನೀಯವಾಗಿರುತ್ತವೆ. ಇದರಿಂದ ಅವನು ವೀರಶೈವ ಇತಿಹಾಸದಲ್ಲಿ ಒಂದು ಮಹತ್ವದ ಸ್ಥಾನವನ್ನು ಹೊಂದಿರುತ್ತಾನೆ.
ಚ0ಗಣಗಿಲ ಮಂಟಪ:
ಇದೇ ಸಮಯದಲ್ಲಿ ಅಥವಾ ಇದಕ್ಕೂ ಸ್ವಲ್ಪಕಾಲ ಮೊದಲು ರುದ್ರಮುನಿಯು ಕಲ್ಯಾಣ ಪಟ್ಟಣಕ್ಕೆ ಬಂದು ಅಲ್ಲಿ ವಾಸವಾಗಿರಬಹುದೆಂದು ತೋರುತ್ತದೆ. ಅವನು ಅಲ್ಲಿ 'ಚಂಗಣಗಿಲ ಮಂಟಪ'ವೆAಬ ಸ್ಥಾನವನ್ನು ರಚಿಸಿ ವಾಸಿಸುತ್ತಿದ್ದನು. ಈ ಮಂಟಪದ ನೆರೆಯಲ್ಲಿ ಜೆಂಗಣಗಿಲು ಎಂದರೆ ಕೆಂಪು ಕಡೆಗಲ ಹೂವಿನ ಗಿಡಗಳು ಹೆಚ್ಚಾಗಿ ಇದ್ದುದರಿಂದ ಈ ಹೆಸರು ಅದಕ್ಕೆ ಬಂದಿರಬಹುದು. ಈ ಮಂಟಪದಲ್ಲಿ ರುದ್ರಮುನಿಯು ಏಕಾಂತದಲ್ಲಿದ್ದುಕೊAಡು ಶಿವಧ್ಯಾನ ಪರಾಯಣನಾಗಿ ಇರುತ್ತಿದ್ದನೆಂದು ವೀರಶೈವ ಗ್ರಂಥಗಳಲ್ಲಿ ಹೇಳಲ್ಪಡುತ್ತದೆ. ರುದ್ರಮುನಿಯು ಇರುವ ಸ್ಥಳವು ಕಲ್ಯಾಣ ಪಟ್ಟಣದಲ್ಲಿ ಈಗಲೂ ತೋರಿಸಲ್ಪಡುತ್ತದೆ. 'ರುದ್ರಮುನಿಯ ಗವಿಯು' ಎಂಬ ಹೆಸರಿನ ಸಳವು ಇಲ್ಲಿದೆ. ಅದು ಮರಿಲಿಂಗದೇವರ ಗುಡ್ಡದ ನೆರೆಯಲ್ಲಿಯೇ ಇದೆ. ಈ ಕಾಲದಲ್ಲಿ ರುದ್ರಮುನಿಯು ಅವ ಕಾರ್ಯಗಳನ್ನು ಮಾಡಿದನು ಮತ್ತು ಅವನು ಆವ ರೀತಿಯಾಗಿ ಚನ್ನಬಸವನಿಗೆ ಸಹಾಯ ಮಾಡಿದನು ಎಂಬುದರ ಬಗ್ಗೆ ವರ್ಣನೆಗಳು ಚನ್ನಬಸವ ಪುರಾಣ, ನಿರಂಜನವAಶ ರತ್ನಾಕರ, ಕಾಲಜ್ಞಾನದ ವಚನಗಳು, ಶರಣ ಲೀಲಾವೃತ ಈ ಮೊದಲಾದ ಗ್ರಂಥಗಳಲ್ಲಿ ಬಂದಿರುತ್ತವೆ. ಅವುಗಳಲ್ಲಿ ಉಲ್ಲೇಖಿವಾದ ಸಂಗತಿಗಳ ಮೇಲಿಂದ ರುದ್ರಮುನಿಯ ಚರಿತ್ರೆಯು ಕೆಳಗೆ ಕೊಡಲ್ಪಟ್ಟಿದೆ. ಹರಳಯ್ಯ ಮಧುವಯ್ಯಗಳು ಬಿಜ್ಜಳನಿಂದ ಘಾತಿಸಲ್ಪಟ್ಟ ಬಳಿಕ ಬಸವೇಶ್ವರನು ಕಲ್ಯಾಣಪಟ್ಟಣವನ್ನು ತೊರೆದು ಕಪ್ಪಡಿಸಂಗಮಳಿಗೆ... [ಪುಟ ೭] (ಪುಟ ೩೩೩) ತೆರಳಿದನು. ಮತ್ತು ಅಲ್ಲಿಯೇ ಅವನು ಐಕ್ಯವನ್ನು ಹೊಂದಿದನು. ಆದರೆ, ಇದರಿಂದ ಕಲ್ಯಾಣ ಪಟ್ಟಣದಲ್ಲಿ ಶಾಂತತೆಯುAಟಾಗಲಿಲ್ಲ. ಶಿವಶರಣರಿಗೂ ಬಿಜ್ಜಳನಿಗೂ ವೈಮನಸ್ಸು ಪ್ರಬಲವಾಗುತ್ತ ಹೋಗಿ, ಅದು ಕಡೆಗೆ ಬಿಜ್ಜಳನ ಕೊಲೆಯಲ್ಲಿ ಪರಿಣಮಿಸಿತು. ಆಗ ರಾಜಧಾನಿಯಲ್ಲಿ ಭೀಕರ ಕದನಗಳೆಸಗಿದವು. ಬಿಜ್ಜಳನ ತರುವಾಯ ರಾಯಮುರಾರಿ ಸೋವಿದೇವನು ರಾಜ್ಯಕ್ಕೆ ಒಡೆಯನಾದನು. ಅವನ ದಂಡಾಳುಗಳಿಗೂ ಶಿವಶರಣರಿಗೂ ಪಟ್ಟಣದಲ್ಲಿ ಕಾದಾಟಗಳು ನಡೆದವು. ಈ ಸ್ಥಿತಿಯಲ್ಲಿ ಬಹು ಜನ ಶರಣರು ಪಟ್ಟಣವನ್ನು ಬಿಟ್ಟು ಹೊರಟು ಹೋಗಲುದ್ಯುಕ್ತರಾದರು. ಆಗ ದೇಶದಲ್ಲಿದ್ದ ವೀರಶೈವ ಸಮಾಜದ ಮೇಲೆ ಒಂದು ಘೋರ ವಿಪತ್ತು ಬಂದೊದಗಿತು. ಒಂದು ವೇಳೆ ಈ ಕಾಲದಲ್ಲಿ ವೀರಶೈವರು ಆತ್ಮರಕ್ಷಣೆಗಾಗಿ ವ್ಯವಸ್ಥೆ ಮಾಡಿಕೊಳ್ಳದಿದ್ದರೆ ಮತ್ತು ಹಾಗೆಯೇ ಚದರಿ ಹೋಗಿದ್ದರೆ ದೇಶದಲ್ಲಿ ಅವರ ಉಳಿವೇ ಅಶಕ್ಯವಾಗುತ್ತಿತ್ತು. ಇಂಥ ಪ್ರಸಂಗದಲ್ಲಿ ಕಿನ್ನರಿ ಬ್ರಹ್ಮಯ್ಯ, ಮಡಿವಾಳ ಮಾಚಿದೇವ ಮತ್ತು ಚನ್ನಬಸವರು ವೀರಶೈವರಿಗೆ ನೇತೃಗಳಾಗಿ ನಿಂತುಕೊAಡು, ಸಮಾಜದ ರಕ್ಷಣೆಯನ್ನು ಮಾಡಲು ನಿರ್ಧರಿಸಿ ರಾಜನೊಡನೆ ಹೋರಾಡಲು ಸಿದ್ಧರಾದರು.
ರುದ್ರಮುನಿಯು ಶಿವಶರಣರಲ್ಲಿ ಸಂಘಟನೆ ಮಾಡಿದ್ದು:
ಆಗ ಈ ಮೂವರು ಪಟ್ಟಣದಲ್ಲಿ ಉಳಿದ ಶಿವಶರಣರನ್ನು ಕಂಡು ಅವರನ್ನು ಒಂದುಗೂಡಿಸಲು ಯತ್ನಿಸಹತ್ತಿದರು. ಆದರೆ ಆರಂಭದಲ್ಲಿ ಅವರಿಗೆ ಇದರಲ್ಲಿ ಯಶಸ್ಸು ದೊರೆಯಲಿಲ್ಲ. ಯಾರೂ ಅವರೊಡನೆ ಇದ್ದುಕೊಂಡು ಕಾದಾಡಲು ಸಿದ್ಧರಾಗಲಿಲ್ಲ (ಕಾಲಜ್ಞಾನದ ವಚನಗಳು ಪುಟ ೨ ರಿಂದ ೫ ವರೆಗೆ ನೋಡಿರಿ). ಆ ಸಮಯದಲ್ಲಿ ಅವರು ಚಂಗಣಗಿಲ ಮಂಟಪದಲ್ಲಿದ್ದ ರುದ್ರಮುನಿಯನ್ನು ಕಂಡು, ಈ ಕಾರ್ಯದಲ್ಲಿ ತಮಗೆ ಸಹಾಯವಾಗಬೇಕೆಂದು ಅವನಿಗೆ ಬಿನ್ನಿಸಿಕೊಂಡರು. ಅದಕ್ಕೆ ರುದ್ರಮುನಿಯು ಒಪ್ಪಲಾಗಿ ಅವರೆಲ್ಲರೂ ಕಲ್ಯಾಣದಲ್ಲಿ ಉಳಿದ ಶಿವಶರಣರನ್ನು ಕಂಡು, ಅವರನ್ನು ಪ್ರೇರಣೆ ಮಾಡಲಿಕ್ಕೆ ಹತ್ತಿದರು. ಇದರಲ್ಲಿ ಅವರು ಯಶಸ್ಸನ್ನು ಹೊಂದಿ ಉಳಿವೆಯ ಮಹಾಮನೆಗೆ ಚಿತ್ತೈಸಬೇಕೆಂದು ನಿರ್ಧರಿಸಿದರು. ಆಗ ೧೨ ಸಾವಿರ ಷಟ್-ಸ್ಥಲ ಬ್ರಹ್ಮಗಳೂ ೭೭೦ ಅಮರಗಣಂಗಳೂ ಒಟ್ಟು ೧೨,೭೭೦ ಜನರು ಸಿದ್ಧರಾದರು. ಅವರು ಒತ್ತಟ್ಟಿಗೆ ಸೇರಿ, ಕಲ್ಯಾಣವನ್ನು ಬಿಟ್ಟು ತೆರಳಿದರು. ಆಗ ರಾಯಮುರಾರಿ ಸೋವಿದೇವನ ದಂಡಾಳುಗಳು ಅವರನ್ನು ಬೆನ್ನಟ್ಟಿದರು. [ಪುಟ ೮] (ಪುಟ ೩೩೪) ವನ ದಂಡಾಳುಗಳು ಅವರನ್ನು ಬೆನ್ನಟ್ಟಿದರು. ಅವರೊಡನೆ ಈ ಶಿವಶರಣರು ಅಲ್ಲಲ್ಲಿ ಕಾಳಗಗಳನ್ನೊಡ್ಡಿ ಉಳಿವೆಯ ಮಹಾರಣ್ಯದ ಕಡೆಗೆ ತೆರಳಿದರು. ಈ ಪ್ರಕಾರ ರುದ್ರಮುನಿಯು ಶಿವಶರಣರಲ್ಲಿ ಒಂದು ವ್ಯವಸ್ಥೆಯನ್ನು ಮಾಡಿ ಅವರನ್ನು ಕಳಿಸಿಕೊಟ್ಟ ಬಳಿಕ ಅವನು ಕಲ್ಯಾಣದಲ್ಲಿಯ ತನ್ನ ಮಂಟಪದಲ್ಲಿಯೇ ಉಳಿದನು. ಅವನು ಚನ್ನಬಸವಣ್ಣ, ಮಡಿವಾಳ ಮಾಚಿದೇವರೊಡನೆ ಉಳಿವಿಗೆ ಈ ಸಮಯದಲ್ಲಿ ಹೋದಂತೆ ತೋರುವದಿಲ್ಲ. ಮುಂದೆ ವೀರಶೈವರು ತೊರಗಲ್ಲು ಸೀಮೆಯನ್ನು ಸೇರಿದರು. ರಾಯಮುರಾರಿಯ ಸೈನ್ಯವು ಅಲ್ಲಿಯೂ ಅವರನ್ನು ಬೆಂಬತ್ತಿತು. ವೈರಿಗಳೊಡನೆ ಕಾಳಗಮಾಡುತ್ತ ಶಿವಶರಣರು ಉಳಿವಿಯ ಮಹಾಘೋರಾರಣ್ಯವನ್ನು ಪ್ರವೇಶಿಸಿದರು. ಈ ವರೆಗೆ ಮಡಿವಾಳ ಮಾಚಿದೇವನೇ ವೀರಶೈವರಿಗೆ ನಾಯಕನಾಗಿ, ವೈರಿಗಳೊಡನೆ ಕಾದಾಡುತ್ತ ಮುಂದೆ ಸಾಗಿದ್ದನು. ಆದರೆ ಅವನು ಮುಂದೆ ಶರಣರೊಡನೆ ಅರಣ್ಯವನ್ನು ಪ್ರವೇಶಿಸಿ ಉಳಿವಿಗೆ ಹೋಗಲಿಲ್ಲ. ಅವನು ಅವರ ಅಪ್ಪಣೆಯನ್ನು ತೆಗೆದುಕೊಂಡು ತನ್ನ ಗ್ರಾಮವಾದ ಹಿಪ್ಪರಿಗೆಗೆ ತಿರುಗಿಬಂದನು. ಇದು ವಿಜಾಪುರದ ಪೂರ್ವಕ್ಕೆ ೨೨ ಮೈಲುಗಳ ಮೇಲಿದೆ. ಮತ್ತು ಅಲ್ಲಿ ತನ್ನ ಗುರುವಾದ ಮಲ್ಲಿಕಾರ್ಜುನ ದೇವನನ್ನು ಕಂಡು, ಕಲ್ಲಿನಾಥನಲ್ಲಿ ಐಕ್ಯವನ್ನು ಹೊಂದಿದನು.
ಉಳಿವಿಗೆ ಪ್ರಯಾಣ:
ಶಿವಶರಣರು ಯುದ್ಧ ಮಾಡುತ್ತ ಅರಣ್ಯವನ್ನು ಪ್ರವೇಶ ಮಾಡಿದ ಸಂಗತಿಯು ಕಲ್ಯಾಣ ನಗರದಲ್ಲಿದ್ದ ರುದ್ರಮುನಿಗೆ ತಿಳಿದಿರಲಿಕ್ಕೆ ಬೇಕು. ಆಗ ಅವನು ಕಲ್ಯಾಣದಿಂದ ಹೊರಟು ಹಿಪ್ಪರಿಗೆಯಲ್ಲಿಯ ಮಲ್ಲಿಕಾರ್ಜುನ ದೇವರನ್ನು ಕಂಡು, ಅವರನ್ನೂ ಸಹ ಕರೆದುಕೊಂಡು, ಉಳಿವಿಗೆ ಬಂದನು. ಆಗ ಅಲ್ಲಿದ್ದ ಶಿವಶರಣರು ಅವರನ್ನು ಸತ್ಕರಿಸಿದರು. ಮುಂದೆ ಶಿವಶರಣರು ಹೆಚ್ಚು ದಿವಸವಿರದೆ ಉಯ್ಯಾಲೆಯ ತೊಟ್ಟಿಲಲ್ಲಿ ಕುಳಿತುಕೊಂಡು ಕೈಲಾಸಕ್ಕೆ ತಮ್ಮ ಕಾಯ ಸಹಿತ ಹೊರಟು ಹೋದರು. ಈ ಸಮಯದಲ್ಲಿ ರುದ್ರಮುನಿಯು, ಮಲ್ಲಿಕಾರ್ಜುನ ದೇವರು, ಮತ್ತು ಹಡಪದ ರೇಚಣ್ಣ ಈ ಮೂವರು ಮಾತ್ರ ಜೀವದಿಂದ ಉಳಿದರು. ಈ ಪ್ರಕಾರ ವೀರಶೈವ ಗ್ರಂಥಗಳಿAದ ತಿಳಿದು ಬರುತ್ತಿದೆ. [ಪುಟ ೯] (ಪುಟ ೩೩೫)
ವೀರಶೈವರ ಧರ್ಮಯುದ್ಧ:
ಈ ಕಾಲದಲ್ಲಿ ವೀರಶೈವರು ಒಂದು ಘೋರವಿಪತ್ತಿಗೆ ಗುರಿಯಾದದ್ದದ್ದು ನಿಸ್ಸಂಶಯವು. ಅವರು ಬಲಾಢ್ಯನಾದ ಒಬ್ಬ ಸಾರ್ವಭೌಮನ ರೋಷಕ್ಕೆ ಪಾತ್ರರಾದರು. ಅವರು ಅವನ ರಾಜ್ಯದಲ್ಲಿ ತಮ್ಮ ಧರ್ಮಾಚರಣೆಗಳಂತೆ ನಡೆಯಲು ಸಾಧ್ಯವಾಗದ್ದರಿಂದ ಅವರು ಶಸ್ತ್ರವನ್ನು ಎತ್ತಬೇಕಾಯಿತು. ಅವರು ಭಯಂಕರವಾದ ಕಾಳಗಗಳನ್ನೆಸಗಿದರು. ಅರಸನ ಪ್ರಬಲ ದಂಡಾಳುಗಳನ್ನು ಎದುರಿಸಿದರು. ಆದರೆ ಗೆಲವು ಸಾಧ್ಯವಾಗಲಿಲ್ಲ. ಅದರಿಂದ ಕಾಡನ್ನಷ್ಟೇ ಆಶ್ರಯಿಸಿದರು. ಕಾಡಿನಲ್ಲಿಯೂ ಅವರು ಜಿನ್ನಿಟ್ಟಲ್ಪಟ್ಟರು. ಅಲ್ಲಿಯೂ ಕೂಡ ಜೀವದ ಹಂಗುದೊರೆದು ಕಾದಿದರು. ಅವರಲ್ಲಿ ಯಾರೂ ತಮ್ಮ ಎದುರಾಳಿಗೆ ಶರಣು ಹೋಗಲಿಲ್ಲ, ಕಡೆತನಕ ಅವನೊಡನೆ ಹೋರಾಡಿದರು. ಕಡೆಗೆ ಮೂವರು ಮಾತ್ರ ಜೀವದಿಂದ ಉಳಿದರು. ಉಳಿದವರೆಲ್ಲರೂ ವೀರಸ್ವರ್ಗವನ್ನು ಹೊಂದಿದರು. ಹೀಗೆ ಒಂದು ಧರ್ಮಯುದ್ಧವು ಈ ಕಾಲದಲ್ಲಿ ಜರಗಿತೆಂಬುದು ಸ್ಪಷ್ಟವಾಗುತ್ತದೆ. ಈ ಎಲ್ಲ ಸಂಗತಿಗಳ ನಿಜತ್ವವನ್ನು ಬಲಪಡಿಸುವಂಥ ಅನೇಕ ಕುರುಹುಗಳು ಈ ಭಾಗದಲ್ಲಿ ಈಗಲೂ ತೋರಿಬರುತ್ತವೆ. ಈ ವೃತ್ತಾಂತವು ಅತ್ಯಂತ ಮನೋವೇಧಕವಾಗಿದೆ. ಇದರ ಬಗ್ಗೆ ನಾನು ಕೆಲವು ಲೇಖಾಂಶಗಳನ್ನು ಬೇಗನೆ ಬರೆಯುವವನಿದ್ದೇನೆ. ಆದರೆ ಈ ಬಿಕ್ಕಟ್ಟಿನ ಪ್ರಸಂಗದಲ್ಲಿ ರುದ್ರಮುನಿಯು ಮಾಡಿದ ಸಮಾಜ ಸೇವೆಯು ಮಹತ್ತರವಾದದ್ದು. ಬಸವೇಶ್ವರನ ತರುವಾಯ ವೀರಶೈವ ಸಮಾಜವು ತನ್ನ ಅಸ್ತಿತ್ವವನ್ನು ಮತ್ತು ವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿದರಲ್ಲಿ ರುದ್ರಮುನಿಯು ಅಗ್ರಗಣ್ಯನು. ಈ ಸಂಗತಿಯು ಮುಂದಿನ ವಿವರಣೆಗಳಿಂದ ಸಹ ಹೆಚ್ಚಿಗೆ ದೃಢಪಡುತ್ತದೆ.
ಶ್ರೀಶೈಲಕ್ಕೆ ರುದ್ರಮುನಿಯ ಪ್ರಯಾಣ:
ಉಳಿವೆಯಲ್ಲಿ ವೀರಶೈವರಿಗೆ ದುರಂತ ಸ್ಥಿತಿಯುಂಟಾದ ಬಳಿಕ ಅವರು ಕಲಚೂರ್ಯರ ರಾಜ್ಯದಲ್ಲಿ ಸುರಕ್ಷಿತವಾಗಿ ಜೀವಿಸುವ ಸಂಭವವಿರಲಿಲ್ಲ. ಈ ಸ್ಥಿತಿಯಲ್ಲಿ ಅವರಲ್ಲಿ ಬಹು ಜನರು ದೇಶತ್ಯಾಗ ಮಾಡಿದರು. ಅವರಲ್ಲನೇಕರು ಶ್ರೀಶೈಲ ಮಲ್ಲಿಕಾರ್ಜುನನಲ್ಲಿ ಹೋಗಿ ಆಶ್ರಯವನ್ನು ಹೊಂದಿದರು. ಕಲ್ಯಾಣದಲ್ಲಿ ಅನಾಹುತಗಳಾಗುವ ಚಿಹ್ನೆಗಳು ತೋರಿದ... [ಪುಟ ೧೦] (ಪುಟ ೩೩೬) ಕೂಡಲೆ ಪ್ರಭುದೇವ, ಮಹಾದೇವಿಯಕ್ಕ, ಮೊದಲಾದವರು ಶ್ರೀಶೈಲಕ್ಕೆ ತೆರಳಿದರು. ಉಳಿದವರಲ್ಲಿ ಬಹು ಜನರು ಉಳಿವಿಯ ಅರಣ್ಯವನ್ನು ಆಶ್ರಯಿಸಿದರು. ಆದರೆ ಅಲ್ಲಿ ಅವರು ಕಡೆಗೆ ಶತ್ರುಗಳ ಕೈಗೆ ತುತ್ತಾದರು. ರುದ್ರಮುನಿ ಮತ್ತು ಇನ್ನಿಬ್ಬರು ಮಾತ್ರ ಜೀವದಿಂದ ಉಳಿದರು. ಈ ಸ್ಥಿತಿಯಲ್ಲಿ ರುದ್ರಮುನಿಗಳು ಈ ಸ್ಥಳವನ್ನು ಬಿಟ್ಟು ಶ್ರೀಶೈಲಕ್ಕೆ ತೆರಳಿದರು (ನಿರಂಜನವAಶ ರತ್ನಾಕರ ಪುಟ ೧೨). ಈ ಕಾಲದಲ್ಲಿ ಶಿವಶರಣರು ಅತ್ಯಂತ ಗೌಪ್ಯದಿಂದ ಕಲ್ಯಾಣದಲ್ಲಿದ್ದರೆಂಬ ವರ್ಣನೆಗಳು ಬರುತ್ತವೆ. ವೀರಶೈವ ಪುರಾಣಗಳಲ್ಲಿಯೂ ಕಾಲಜ್ಞಾನಗಳಲ್ಲಿಯೂ ಈ ತರದ ಉಲ್ಲೇಖಗಳು ಇರುತ್ತವೆ. ಇಂಥ ಬಿಕ್ಕಟ್ಟಿನ ಸಮಯದಲ್ಲಿ ಅವರು ಹೀಗೆ ವರ್ತಿಸುವದು ಸ್ವಾಭಾವಿಕವೇ. ಇಲ್ಲದಿದ್ದರೆ ಶತ್ರುಗಳು ಅವರನ್ನು ಘಾತಿಸದೆ ಬಿಡುತ್ತಿರಲಿಲ್ಲ. ಈ ಕಾಲದಲ್ಲಿ ಅವರು ಕಲ್ಯಾಣವೆಂದರೆ ಕಲ್ಯಾಣ ಮಾತ್ರವಲ್ಲ, ಅದನ್ನು ಬಿಟ್ಟು ಗ್ರಾಮ್ಯಾಂತರಗಳಲ್ಲಿಯೂ ಹೋಗಿ ಗೌಪ್ಯವಾಗಿ ಅವರು ವಾಸವಾಗಿರಬೇಕು.
ರುದ್ರಮುನಿಯ ನಾಯಕತ್ವ:
ಇಂಥ ಪ್ರಸಂಗದಲ್ಲಿ ರುದ್ರಮುನಿಯು ಶಿವಶರಣರಿಗೆ ಮುಖ್ಯ ನಾಯಕನಾಗಿ ನಿಂತನು. ಬಸವೇಶ್ವರನ ಕಾಲದಲ್ಲಿ ಉದಯಕ್ಕೆ ಬಂದ ಶರಣರು ಈಗ ಜೀವದಿಂದಿರಲಿಲ್ಲ. ರುದ್ರಮುನಿಯು ಉಳಿವಿಯನ್ನು ಬಿಟ್ಟು ಶ್ರೀಶೈಲಕ್ಕೆ ತೆರಳಿದ ಸ್ಥಳದಲ್ಲಿ ಬಹುಜನ ಶರಣರು ಕಲ್ಯಾಣ ಪಟ್ಟಣವನ್ನು ಬಿಟ್ಟು ಅಲ್ಲಿಯೇ ಅರಣ್ಯದಲ್ಲಿ ಆಶ್ರಯವನ್ನು ಹಿಡಿದುಕೊಂಡಿದ್ದರು. ಶ್ರೀಶೈಲವು ಕಲಚೂರ್ಯರ ರಾಜ್ಯವಾಗಿರಲಿಲ್ಲ. ಆದುದರಿಂದ ಉಳಿವಿಯ ವಿಪತ್ತುಗಳು ಅವರಿಗೆ ಸಂಭವಿಸುವುದು ಶಕ್ಯವಿರಲಿಲ್ಲ. ರುದ್ರಮುನಿಯು ಅಲ್ಲಿಗೆ ಹೋದ ಬಳಿಕ ಅಲ್ಲಿ ನೆರೆದವರಲ್ಲಿ ಒಂದು ಸಂಘಟನೆಯನ್ನುAಟು ಮಾಡಿದನು ಮತ್ತು ವೀರಶೈವ ಧರ್ಮವನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದನು.
ವೈರಿಗಳೊಡನೆ ಹೋರಾಟ:
ರುದ್ರಮುನಿಯು ಮೊದಲಿನಿಂದಲೂ ಶೈವಾಚಾರ್ಯನೆನಿಸಿಕೊಂಡು ವೀರಶೈವರಲ್ಲಿ ಬಹು ಉನ್ನತ ಸ್ಥಾನವನ್ನು ಹೊಂದಿದ್ದನು. ಅವನು ಶ್ರೀಶೈಲಕ್ಕೆ ಹೋದ ಬಳಿಕ ಅಲ್ಲಿ ಮುಕ್ತಿಮುನಿ ಎಂಬುವನಿಗೆ ಪಟ್ಟವನ್ನು ಕಟ್ಟಿದನು (ಸಿರಂಜನ ವಂಶರತ್ನಾಕರ ಪುಟ ೧೫). ಈ ಮುಕ್ತಿಮುನಿಯು ರುದ್ರಮುನಿಯ ಶಿಷ್ಯನಾಗಿದ್ದನು. ರುದ್ರಮುನಿಯೂ ಮುಕ್ತಿಮುನಿಯೂ ಶ್ರೀಗಿರಿ... [ಪುಟ ೧೧] (ಪುಟ ೩೩೭)ಸಿಂಹಾಸನದಲ್ಲಿ ನಿಂತು ದೇಶಗಳನ್ನು ಸಂಚರಿಸಿದರು. ಮತ್ತು ಧರ್ಮಾಭಿವೃದ್ಧಿಕಾರ್ಯಗಳನ್ನು ಮಾಡಿದರು (ಚನ್ನಬಸವಪುರಾಣ ೩-೨೫). ಈ ಕಾಲದಲ್ಲಿ ಈ ಉಭಯತರಿಗೆ ತಮ್ಮ ಶರಣಸಮುದಾಯದೊಡನೆ ಶತ್ರುವನ್ನು ಸಹ ಎದುರಿಸುವ ಪ್ರಸಂಗಗಳು ಬಂದವು (ಚನ್ನಬಸವ ಪುರಾಣ ೩-೩೫ ನೋಡಿರಿ). ಮುಂದೆ ಮುಕ್ತಿಮುನಿಯು ಆಜಾತ ಭಸ್ಮಾನಕ ಎಂಬ ನೃಪನಿಗೆ ಪಟ್ಟಗಟ್ಟಿ ತನ್ನ ಶಿಷ್ಯನಾದ ದಿಗಂಬರಸು ಮುಕ್ತಿಮುನಿಗೆ ಮಲೆದೇಶದಲ್ಲಿ ಶತ್ರುಗಳ ಉಪದ್ರವವು ಹೆಚ್ಚಾಗಿದ್ದರಿಂದ ಅದನ್ನು ನಿಲ್ಲಿಸಲು ಅವನನ್ನು ಕಳುಹಿಸಿದನು. ದಿಗಂಬರಸನು ಈ ಕಾರ್ಯವನ್ನು ಜರುಗಿಸಿ ವೈರಿಗಳನ್ನು ಸಂಹರಿಸಲ್ಪಟ್ಟ ಸ್ಥಳದಲ್ಲಿ ಬಾಳೇಹಳ್ಳಿ ಎಂಬ ಪಟ್ಟಣವನ್ನು ಕಟ್ಟಿ ಅಲ್ಲಿ ಸಿಂಹಾಸನಾಧೀಶನಾದನು.
ರುದ್ರಮುನಿಯ ಅಂತ್ಯ:
ಶ್ರೀಶೈಲದಲ್ಲಿ ರುದ್ರಮುನಿಯು ಶಿವಶರಣರೊಂದಿಗೆ ಇದ್ದು ವೀರಶೈವ ಮತವನ್ನು ಈ ಪ್ರಕಾರ ಉಜ್ಜೀವನಗೊಳಿಸಿ ಮುಂದೆ ಪುನಃ ಕಲ್ಯಾಣಪಟ್ಟಣಕ್ಕೆ ಬಂದನು. ಮತ್ತು ಅಲ್ಲಿಯೇ ಸಮಾಧಿಸ್ಥನಾದನು. ಅವನ ಸಮಾಧಿಯು ಈಗಲೂ ಅಲ್ಲಿಯೇ ಇದೆ. ಈ ಪ್ರಕಾರ ಬಸವೇಶ್ವರನ ತರುವಾಯ ವೀರಶೈವ ಸಮಾಜದ ಮೇಲೆ ಎಂಥ ಕಠಿಣ ಪ್ರಸಂಗಗಳು ಬಂದೆAಬುದನ್ನು ವಾಚಕರು ಊಹಿಸಬೇಕು. ಅವರು ತಮ್ಮ ಧರ್ಮರಕ್ಷಣೆಗಾಗಿ ಮತ್ತು ಅಸ್ತಿತ್ವಕ್ಕಾಗಿ ಹೋರಾಡುವ ಪ್ರಸಂಗಗಳು ಬಂದವು. ಆಗ ದೇಶದ ತುಂಬೆಲ್ಲ ಕೆಲಕಾಲ ಹೋರಾಟಗಳು ನಡೆದವು. ಆದರೆ ಕಡೆಗೆ ಬಸವೇಶ್ವರನ ತತ್ವಗಳಿಗೆ ಜಯವು ಪ್ರಾಪ್ತವಾಯಿತು. ಮತ್ತು ವೀರಶೈವ ಧರ್ಮವು ಈ ಕಾಲದಲ್ಲಿ ಶ್ರೀಶೈಲದಿಂದ ಬಳಗಾವಿ ಬನವಾಸಿ ಪ್ರಾಂತದ ವರೆಗೂ ಮೊದಲಿನಕಿಂತಲೂ ಹೆಚ್ಚಾಗಿ ದೃಢವಾಗಿ ನೆಲೆಗೊಂಡಿತು. ಈ ಪ್ರಕಾರ ಬಸವೇಶ್ವರನ ತರುವಾಯ ಶಿವಶರಣರ ತತ್ವಗಳನ್ನು ದೇಶದಲ್ಲಿ ಸ್ಥಾಯಿಕವಾಗಿ ಮಾಡಿದ ಶ್ರೇಯಸ್ಸು ರೇವಣಸಿದ್ಧೇಶ್ವರನ ಪುತ್ರನಾದ ರುದ್ರಮುನಿಗೆ ಸಲ್ಲುತ್ತದೆ. ಅವನ ತರುವಾಯ ಅವನ ಶಿಷ್ಯಪರಂಪರೆಗೂ ಕೂಡ ಸಲ್ಲುತ್ತದೆ. ರುದ್ರಮುನಿಗೆ ಸಂಬAಧಿಸಿದ ಅವನ ಶಿಲಾಶಾಸನಗಳೂ ನಮಗೆ ಈ ವರೆಗೆ ದೊರೆತಿರುವುದಿಲ್ಲ. ಆದ್ದರಿಂದ ಅವನ ಈ ಚರಿತ್ರೆಯಲ್ಲಿ ಯಾವ... [ಪುಟ ೧೨] (ಪುಟ ೩೩೮) ಸಂಗತಿಗಳು ನಿಜವೆಂಬುದನ್ನು ದೃಢಪಡಿಸಲು ನಮಗೆ ಪ್ರತ್ಯಂತರ ಸಾಧನಗಳಿರುವುದಿಲ್ಲ. ಪುರಾಣಗಳಲ್ಲಿ ಮತ್ತು ಕಾಲಜ್ಞಾನಗಳಲ್ಲಿ ನಂಬಲರ್ಹವಾಗದ ಅನೇಕ ಅದ್ಭುತಗಳೂ ಅಸಂಭವನೀಯ ಸಂಗತಿಗಳೂ ಹೇಳಲ್ಪಡುವುದುಂಟು. ಆದರೆ ಅಂಥವುಗಳನ್ನು ಬೇರೆಯಾಗಿ ತೆಗೆದಿಟ್ಟು ನಿಜವಾದ ಸಂಗತಿಗಳು ಆವವಿರಬಹುದೆಂಬುದನ್ನು ನಾವು ಐತಿಹಾಸಿಕ ಪರಿಸ್ಥಿತಿ ಮತ್ತು ಸ್ಥಾನಿಕ ಕುರುಹುಗಳ ಮೂಲಕ ಊಹೆಯಿಂದ ಕಂಡು ಹಿಡಿಯಲು ಶಕ್ಯವಿರುತ್ತದೆ. ಈ ರೀತಿ ಯೋಚಿಸಲು, ರುದ್ರಮುನಿಯ ಚರಿತ್ರೆಯಲ್ಲಿ ಕೆಳಗಿನ ಸಂಗತಿಗಳು ನಿಜವಾದವುಗಳೆಂದು ನನಗೆ ಕಂಡುಬರುತ್ತದೆ.
ರುದ್ರಮುನಿಯ ಚರಿತ್ರೆಯಲ್ಲಿ ನಂಬಲರ್ಹವಾದ ಅಂಶಗಳು:
೧. ರುದ್ರಮುನಿಯು ರೇವಣಸಿದ್ಧೇಶ್ವರನ ಮಗನೆಂಬುದರಲ್ಲಿ ಸಂದೇಹವಿಲ್ಲ. ಅವನು ಯಾವ ರೀತಿಯಿಂದ ಹೇಗೆ ಉದ್ಭವಿಸಿದನೆಂಬುದಕ್ಕೆ ಒಂದು ದಂತಕಥೆಯುAಟು. ಆದರೆ ಅದು ನಿಜವೋ ಹೇಗೆ ಎಂಬುದನ್ನು ನಾವು ಚರ್ಚಿಸುವ ಅವಶ್ಯವಿಲ್ಲ. ಮತ್ತು ಹಾಗೆ ಚರ್ಚಿಸುವುದರಿಂದ ಆವ ಪ್ರಯೋಜನವೂ ಇಲ್ಲ. ಮಹಾಪುರುಷರು ಅವತಾರ ಮಾಡಿದರೆಂಬುದನ್ನು ತಿಳಿಯುವುದೇ ಮಹತ್ವದ್ದು.
೨. ರೇವಣಸಿದ್ಧೇಶ್ವರನು ತದ್ದೇವಾಡಿ ಪ್ರಾಂತದಲ್ಲಿ ಅಂದರೆ ಈಗಿನ ಮಂಗಳವೇಡೆಯ ನೆರೆಯಲ್ಲಿ ಇದ್ದಾಗ, ರುದ್ರಮುನಿಯು ಜನಿಸಿದನು. ರೇವಣಸಿದ್ಧೇಶ್ವರನು ಸಿದ್ಧನಕೆರೆಯನ್ನು ಕಟ್ಟುವಾಗ, ಅವನು ಅಲ್ಲಿ ಹುಟ್ಟಿದನೆಂಬ ಐತಿಹ್ಯವಿದೆ. ಈ ಕೆರೆಯು ಈ ಭಾಗದಲ್ಲಿಯೇ ಇದೆ. ರೇವಣಸಿದ್ಧೇಶ್ವರನು ಈ ಪ್ರಾಂತದಲ್ಲಿ ಬಹು ದಿವಸ ವಾಸ ಮಾಡಿದನು. ಆದ್ದರಿಂದ ರುದ್ರಮುನಿಯಾದರೂ ಇಲ್ಲಿಯೇ ಜನಿಸಿದನೆಂದು ತಿಳಿಯಲು ಪ್ರತ್ಯವಾಯವಿಲ್ಲ.
೩. ರುದ್ರಮುನಿಗೆ ರೇವಣಸಿದ್ಧೇಶ್ವರನೇ ಶಿವದೀಕ್ಷೆಯನ್ನು ಕೊಟ್ಟನೆಂದು ಹರಿಹರನು ಹೇಳುತ್ತಾನೆ. ರುದ್ರಮುನಿಯೇ ಹಾವಿನಹಾಳ ಕಲ್ಲಯ್ಯನಿಗೆ ಶಿವದೀಕ್ಷೆಯನ್ನು ಕೊಟ್ಟಿದ್ದಾನೆ. ಹರಿಹರನು, ರುದ್ರಮುನಿಯು ಗುರುವೂ ಶೈವಾಚಾರ್ಯನೂ ಎಂದು, ಅವನನ್ನು ಹೊಗಳುತ್ತಾನೆ. ಆದ್ದರಿಂದ... [ಪುಟ ೧೩] (ಪುಟ ೩೩೯) ರುದ್ರಮುನಿಯು ಪ್ರಬುದ್ಧನಾಗುವ ವರೆಗೂ, ಈ ಭಾಗದಲ್ಲಿಯೇ ವಾಸಮಾಡಿರಲಿಕ್ಕೆ ಬೇಕು. ಅವನು ರೇವಣಸಿದ್ಧೇಶ್ವರನ ಕೂಡ ಸೊಲ್ಲಾಪುರಕ್ಕೂ ಹೋಗಿದ್ದನೆಂದು ಹರಿಹರನು ತನ್ನ ರಗಳೆಯಲ್ಲಿ ಹೇಳುತ್ತಾನೆ.
೪. ರೇವಣಸಿದ್ಧನು ಪಾಲ್ಕುರಿಕೆಗೆ ಹೋದ ಬಳಿಕ ರುದ್ರಮುನಿಯು ಮಂಗಳವಾಡದಲ್ಲಿಯೇ ವಾಸಿಸಿರಬೇಕು. ಅವನು ಕಲ್ಯಾಣಕ್ಕೆ ಬಸವೇಶ್ವರನ ಕಾಲದಲ್ಲಿ ಹೋಗಿಲ್ಲ. ಬಸವೇಶ್ವರನ ಚರಿತ್ರೆಯಲ್ಲಿ ರುದ್ರಮುನಿಯ ಉಲ್ಲೇಖಗಳು ಬರುವುದಿಲ್ಲ. ಅವನು ಶಿವಾನುಭವಮಂಟಪದಲ್ಲಿಯ ವಿವಾದಗಳಲ್ಲಿ ಭಾಗವಹಿಸಿರುವುದು ಕಂಡು ಬರುವುದಿಲ್ಲ.
೫. ಬಸವೇಶ್ವರನನ್ನು ರುದ್ರಮುನಿಯು ಶಿವಾನುಭವಮಂಟಪದಲ್ಲಿ ಕಾಣದಿದ್ದರೂ, ಅದು ಯಾವ ತರದ ವೈರಭಾವದಿಂದಲ್ಲ. ಯಾಕಂದರೆ ಕಟ್ಟ ಕಡೆಗೆ ಬಸವನು ಕಲ್ಯಾಣವನ್ನು ಬಿಟ್ಟು ತೆರಳಿದ ಬಳಿಕ ಶಿವಶರಣರಿಗೆ ಅನೇಕ ರೀತಿಯಿಂದ ರುದ್ರಮುನಿಯೇ ಸಹಾಯ ಮಾಡಿದ್ದಾನೆ. ಅವನು ಹೀಗೆ ಸಹಾಯಮಾಡಿದ್ದರೆ ಮೇಲಿಂದ ವಚನಕಾರರ ಧಾರ್ಮಿಕ ತತ್ವಗಳಿಗೆ ಅವನು ವಿರೋಧಿಯಾಗಿರಲಿಲ್ಲವೆಂದು ಕಂಡುಬರುತ್ತದೆ.
೬. ಆದರೆ ರುದ್ರಮುನಿಯು ಯಾವಾಗ್ಗೆ ಕಲ್ಯಾಣಕ್ಕೆ ಬಂದನೆAಬುದನ್ನು ಹೇಳಲಿಕ್ಕೆ ಬರಲಾರದು. ಆದರೆ ಅವನು ಹಿಂದುಗಡೆ ಅಲ್ಲಿಗೆ ಬಂದು ಒಂದು ಮಂಟಪವನ್ನು ಏರ್ಪಡಿಸಿಕೊಂಡು, ಅಲ್ಲಿಯೇ ವಾಸವಾಗಿದ್ದನು. ಈ ಮಂಟಪದ ಹೆಸರು 'ಚಂಗಣಗಿಲು ಮಂಟಪ' ಎಂದು ಇದೆ.
೭. ಬಿಜ್ಜಳನು ಘಾತಿಸಲ್ಪಟ್ಟ ಮೇಲೆ ರುದ್ರಮುನಿಯು ಅಂಜಿ ಹೋದ ಶಿವಶರಣರನ್ನು ಹುರಿದುಂಬಿಸಿದನು. ಎಲ್ಲರೂ ಒಕ್ಕಟ್ಟಿನಿಂದ ಕಲ್ಯಾಣದಿಂದ ಹೊರಬೀಳುವ ಏರ್ಪಾಡು ಮಾಡಿದನು. ಶರಣರು ಮುಂದೆ ಕಾಡನ್ನು ಪ್ರವೇಶಿಸಿ, ಉಳಿವಿಗೆ ಹೋದರು. ಇದು ತಿಳಿದ ಕೂಡಲೆ, ರುದ್ರಮುನಿಯು ತಾನೂ ಅಲ್ಲಿಗೆ ಹೋಗಿ, ಕಡೆಯ ವರೆಗೂ ಅವರ ಸಮೀಪದಲ್ಲಿಯೇ ಉಳಿದನು. ಶಿವಶರಣರಿಗೆ ಒದಗಿದ ಈ ಘೋರ ಪ್ರಸಂಗದಲ್ಲಿ ರುದ್ರಮುನಿಯು ಅವರನ್ನು ತ್ಯಜಿಸಲಿಲ್ಲ.
೮. ಆ ಮೇಲೆ ರುದ್ರಮುನಿಯು ಚನ್ನಬಸವ ಪುರಾಣದಲ್ಲಿ ಬರೆದಂತೆ ಆ ಕಾಲಕ್ಕೆಯೇ ಕಲ್ಯಾಣಕ್ಕೆ ತಿರುಗಿ ಹೋಗಲಿಲ್ಲವೆಂದು ನನಗೆ... [ಪುಟ ೧೪] (ಪುಟ ೩೪೦) ತೋರುತ್ತದೆ. ಕೆಲವು ಗ್ರಂಥಗಳಲ್ಲಿ ಹೇಳಿದಂತೆ ಅವನು ಶ್ರೀಶೈಲಕ್ಕೆ ಹೋಗಿರಲಿಕ್ಕೆ ಬೇಕು. ಯಾಕಂದರೆ, ಈ ಕಾಲದಲ್ಲಿ ರಾಯಮುರಾರಿ ಸೋವಿದೇವನು ವೀರಶೈವರನ್ನು ಸುರಕ್ಷಿತಯಿಂದ ತನ್ನ ರಾಜ್ಯದಲ್ಲಿ ಇರಗೊಡುವ ಸಂಭವವಿರಲಿಲ್ಲ. ಅವನು ಅವರೊಡನೆ ಕಡು ಹಗೆತನದಿಂದ ವರ್ತಿಸುವುದು ಸ್ವಾಭಾವಿಕವಾಗಿದೆ.
೯. ಈ ಕಾಲಕ್ಕೆ ರುದ್ರಮುನಿಯು ಮಂಗಳವಾಡಕ್ಕೂ ಹೋಗುವ ಸಂಭವವಿಲ್ಲ. ಯಾಕಂದರೆ ರಾಯಮುರಾರಿ ಸೋವಿದೇವನಿಗೆ ಕಲ್ಯಾಣವು ರಾಜಧಾನಿಯಾಗಿದ್ದರೂ ಕೂಡ ಅವನು ಅಲ್ಲದೆ ಮಂಗಳವಾಡದಲ್ಲಿಯೂ ಇರುತ್ತಿದ್ದನೆಂದು ಶಿಲಾಶಾಸನಗಳಲ್ಲಿ ಹೇಳಿದೆ (ಒ. ಇ. ಖ. ೧೬೦ oಜಿ ೧೯೩೪). ಮಂಗಳವಾಡ ಸೀಮೆಯು ಆಗ ವೀರಶೈವ ಧರ್ಮ ಪ್ರತಿಷ್ಠಾಪನಾ ಕಾರ್ಯದಲ್ಲಿ ಅಗ್ರಸ್ಥಾನವನ್ನು ಹೊಂದಿತ್ತು. ವೀರಶೈವರನ್ನು ಹತ್ತಿಕ್ಕಬೇಕಂತಲೇ ರಾಯಮುರಾರಿಯು ಆಗ ತನ್ನ ಮುಖ್ಯ ಸ್ಥಾನವನ್ನಾಗಿ ಮಾಡಿಕೊಂಡಿರಬಹುದು. ಅವನು ಅಲ್ಲಿ ಗಡಿಯಲ್ಲಿ ಸಹ ವಾಸವಾಗಿದ್ದನೆಂದು ಮೇಲಿನ ಶಿಲಾಶಾಸನದಿಂದ ತಿಳಿದುಬರುತ್ತದೆ.
೧೦. ರುದ್ರಮುನಿಯು ಶ್ರೀಶೈಲಕ್ಕೆ ಹೋದ ಬಳಿಕ ಅಲ್ಲಿ ಕೂಡಿದ ವೀರಶೈವರಲ್ಲಿ ಒಂದು ಬಲವಾದ ಸಂಘಟನೆಯನ್ನುAಟು ಮಾಡಿದನು. ಮತ್ತು ಇದರ ನೆರವಿನಿಂದ ಅವನು ಅನೇಕ ರೀತಿಯಿಂದ ಧರ್ಮ ಪ್ರಸಾರಕಾರ್ಯದಲ್ಲಿ ತೊಡಗಿದನು. ಯುದ್ಧಗಳನ್ನು ಮಾಡುವ ಪ್ರಸಂಗಗಳೂ ಬಂದವು. ಆದರೆ ಇವುಗಳ ಸವಿಸ್ತಾರ ವೃತ್ತಾಂತಗಳು ನಮಗೆ ಇನ್ನೂ ದೊರೆತಿಲ್ಲ.
೧೧. ಆ ಮೇಲೆ ರುದ್ರಮುನಿಯು ಶ್ರೀಶೈಲದಿಂದ ಕಲ್ಯಾಣಕ್ಕೆ ಬಂದನು. ಆಗ ಕಲಚೂರ್ಯ ವಂಶದವರು ತಮ್ಮ ಕ್ಷಾತ್ರಬಲವನ್ನು ಕಳೆದುಕೊಂಡಿದ್ದರು. ಪ್ರಸಿದ್ಧ ಶೈವ ಸೇನಾಪತಿಯಾದ ಬಮ್ಮದೇವನು ಪದಚ್ಯುತನಾದ ಚಾಲುಕ್ಯ ೪ನೇ ಸೋಮೇಶ್ವರನ ಪಕ್ಷವಹಿಸಿ ಕಲ್ಯಾಣದಲ್ಲಿದ್ದನು. ಆಗ ಚಾಲುಕ್ಯರು ಪುನಃ ರಾಜ್ಯಪದದಲ್ಲಿ ಆರೂಢರಾಗಿದ್ದರು. ಇದು ಶೈವನಾದ ಬಮ್ಮದೇವನ ಸಹಾಯದಿಂದ. ಆದುದರಿಂದ ಈ ಕಾಲದಲ್ಲಿಯೇ ರುದ್ರಮುನಿಯು ಕಲ್ಯಾಣಕ್ಕೆ ಪುನಃ ಬಂದು ವಾಸಿಸಿರಬಹುದು. ಇದು ೧೧೮೩ರಲ್ಲಿ. [ಪುಟ ೧೫] (ಪುಟ ೩೪೧) ರುದ್ರಮುನಿಯ ಸಮಾಧಿಯು ಕಲ್ಯಾಣದಲ್ಲಿ ಈಗಲೂ ಇದೆ.
೧೨. ಬಾಳೇಹಳ್ಳಿ ಸಿಂಹಾಸನಾಧಿಪತಿಗಳ ಬಿರುದಾವಳಿಯಲ್ಲಿ:— “ಶ್ರೀಮದ್ದಾಕಾದ್ರೇಣುಕಾಚಾರ್ಯ ಪುಣ್ಯ ಪ್ರಚಂಡ ಕಾಂಡನಿಧಿ ಕಲಾನಿಧಿ ಶ್ರೀಮದ್ ರುದ್ರಮುನೀಶ್ವರ ದಿಗಂಬರ ಮುಕ್ತಿ ಮುನೀಶ್ವರ ಗುರು ಪರಂಪರಾಗತ ಭದ್ರತರ ಭದ್ರಾತೀರ ಭಾಸಮಾನ ಶ್ರೀಮದ್ರಂಭಾಪುರೀ ವೀರಸಿಂಹಾಸನಾಧೀಶ್ವರ” ಎಂಬ ಶಬ್ದಗಳು ಇರುತ್ತವೆ. ಇದರಿಂದ ರುದ್ರಮುನಿ ಮತ್ತು ದಿಗಂಬರ ಮುಕ್ತಿ ಮುನಿ ಇವರು ಬಾಳೇಹಳ್ಳಿ ಸಿಂಹಾಸನಾಧೀಶ್ವರರ ಪೂರ್ವಜರೆಂದು ಗೊತ್ತಾಗುತ್ತದೆ. ಮತ್ತು ಇವರ ಧೀರೋದಾತ್ತ ಕಾರ್ಯಗಳ ಮೂಲಕ 'ವೀರಸಿಂಹಾಸನ'ವೆAದು ಬಾಳೇಹಳ್ಳಿ ಸಿಂಹಾಸನವು ಈಗಲೂ ಕರೆಯಲ್ಪಡುತ್ತದೆ.
ಈ ಮೇಲ್ಕಂಡ ಸಂಗತಿಗಳು ನಂಬಲರ್ಹವಾದುವೆAದು ನನಗೆ ತೋರುತ್ತದೆ.
ರುದ್ರಮುನಿಯು ವೀರಶೈವನೇ ಹೇಗೆ?
ವೀರಶೈವ ಗ್ರಂಥಗಳಲ್ಲಿ ರುದ್ರಮುನಿಯ ವಿಷಯವಾಗಿ ಬಂದ ಅನೇಕ ವಿವರಣೆಗಳನ್ನು ನಾನು ಈ ಲೇಖದಲ್ಲಿ ಚರ್ಚಿಸಿದ್ದೇನೆ. ಅವುಗಳ ಮೇಲಿಂದ ರುದ್ರಮುನಿಯು ವೀರಶೈವನೆಂಬುದರಲ್ಲಿ ಆವ ಸಂದೇಹವೂ ಉಳಿಯಲಾರದು. ಅವನಿಗೂ ಬಸವಾದಿ ಪ್ರಮಥರ ಕಾಲದಲ್ಲಿ ಉದಯವಾದ ಶಿವಶರಣರಿಗೂ ಯಾವ ತರದ ಒಡಕುಗಳು ಕಂಡುಬರುವುದಿಲ್ಲ. ಅವನು ಆರಂಭದಲ್ಲಿ ಬಸವನ ಶಿವಾನುಭವ ಮಂಟಪದಲ್ಲಿ ಸಿದ್ಧರಾಮ, ಮಡಿವಾಳ ಮಾಚಿದೇವರಂತೆ ಸೇರ್ಪಡೆಯಾಗದಿದ್ದರೂ ಶಿವಶರಣರಿಗೆ ಬಿಕ್ಕಟ್ಟಿನ ಸಮಯವು ಪ್ರಾಪ್ತವಾಗಲು ರುದ್ರಮುನಿಯು ಅವರಿಗೆ ಸಹಾಯಕನಾಗಿ ನಿಂತನು. ಅವನು ಆರಂಭದಲ್ಲಿ ಕಲ್ಯಾಣ ಪಟ್ಟಣದಲ್ಲಿದ್ದಾಗ... (ಅವನು ಸಾಯುವ ಮುಂಚೆ ಮುಪ್ಪಿನವನಾಗಿರಬೇಕು. ಅವನು ಹಾವಿನಹಾಳ ಕಲ್ಲಯ್ಯನಿಗೆ ದೀಕ್ಷೆ ಮಾಡಿದಾಗ ದೊಡ್ಡವನಿರಲಿಕ್ಕೆ ಬೇಕು. ಅಂದರೆ ೨೦-೩೦ ವರ್ಷದವನಿರಬೇಕು. ಮುಂದೆ ೧೨ ವರ್ಷ ಬಸವೇಶ್ವರನ ಕಾಲ, ಅವನ ತರುವಾಯ ೧೦-೧೫ ವರ್ಷಗಳು ಸಂದಿದ್ದವು. ಅಂತೂ ಅವನು ಸಮಾಧಿಸ್ಥನಾದಾಗ ೫೦-೬೦ ವರ್ಷ ವಯಸ್ಸಿನವನಿರಬೇಕು). [ಪುಟ ೧೬] (ಪುಟ ೩೪೨) ಇದಲ್ಲದಿದ್ದರೂ ಹಿಂದುಗಡೆ ಅವನು ಅಲ್ಲಿಗೆ ಬಂದು ಅಲ್ಲಿ ತನ್ನಗೋಸ್ಕರ 'ಚಂಗಣಗಿಲಮAಟಪ'ವೆAಬ ಒಂದು ಆವಾಸ ಸ್ಥಾನವನ್ನು ಕಲ್ಪಿಸಿಕೊಂಡು ಅಲ್ಲಿ ಇರುತ್ತಿದ್ದನು. ಅಲ್ಲಿ ಅವನು ಶಿವಯೋಗನಿರತನಾಗಿದ್ದನು. ಅವನಿಗೆ 'ಮುನಿ' ಎಂಬ ಹೆಸರೂ ಇದೆ. ಈ ಹೆಸರು ವೀರಶೈವ ಸಮಾಜದಲ್ಲಿ ವಿಶೇಷ ಶ್ರೇಷ್ಠತೆಯನ್ನು ಹೊಂದಿದವರಿಗೆ ಇದೆಯೆಂದು ಶಿಲಾಶಾಸನಗಳಿಂದ ಕಂಡುಬರುತ್ತದೆ (ಶಿವಾನುಭವ ಸಂಪುಟ ೧೨ ಸಂಚಿಕೆ ೨, ಪುಟ ೨೫೫ ನೋಡಿರಿ). ರುದ್ರಮುನಿಯು ಹಾವಿನಹಾಳ ಕಲ್ಲದೇವನಿಗೆ ಶಿವದೀಕ್ಷೆಯನ್ನು ಕೊಟ್ಟಿದ್ದಾನೆ. ಆದರೆ ಈ ಕಲ್ಲದೇವನು ವೀರಶೈವ ವಚನಕಾರರಲ್ಲಿ ಪ್ರಮುಖನಾಗಿದ್ದಾನೆ. ಅವನ ಅನೇಕ ವಚನಗಳನ್ನು ಬಹು ಜನ ವೀರಶೈವ ಗ್ರಂಥಕಾರರು ತಮ್ಮ ಗ್ರಂಥಗಳಲ್ಲಿ ಉದಾಹರಿಸಿದ್ದಾರೆ. ಅವುಗಳಲ್ಲಿ ವೀರಶೈವ ಮತತತ್ವಗಳೇ ನಿರೂಪಿಸಲ್ಪಟ್ಟಿವೆ. ಈ ಎಲ್ಲ ಸಂಗತಿಗಳಿAದ ರುದ್ರಮುನಿಯು ವೀರಶೈವನೇ ಎಂದು ಹೇಳಲು ಪ್ರತ್ಯವಾಯವಿಲ್ಲ. ಹರಿಹರನು ತನ್ನ ರಗಳೆಯಲ್ಲಿ ರೇವಣಸಿದ್ಧೇಶ್ವರನೇ ರುದ್ರಮುನಿಗೆ ದೀಕ್ಷೆಯನ್ನು ಕೊಟ್ಟನೆಂದು ಹೇಳಿದ್ದಾನೆ (ಹರಿಹರನ ರಗಳೆಗಳು ಭಾಗ ೨ ಪುಟ ೫೨). ಆದರೆ ನಿರಂಜನ ವಂಶ ರತ್ನಾಕರ ಪುಟ ೧೦ ಇದರಲ್ಲಿ ಹೇಳಿರುವುದೇನೆಂದರೆ:— “ಆ ಮಗುವು ಭಸ್ಮ, ರುದ್ರಾಕ್ಷಿ, ಲಿಂಗಧಾರಣ ಸಹಿತವಾಗಿ ಬಂದುದನ್ನು ರೇಣುಕರು ಕಂಡು ಪರಮ ಸಂತೋಷಿತರಾಗಿ ಈ ಮಗುವು ಅನಾಧಿ ಜಂಗಮರೂಪವೆAದು ತಿಳಿದು ರುದ್ರಮುನಿ ಎಂಬ ನಾಮವನ್ನು ಕೊಟ್ಟು ಸಂರಕ್ಷಿಸಿ ಆ ಮೇಲೆ ಪ್ರಭುವಂತೋರ್ವರಾದ ಗುರುಲಿಂಗಣಾಚಾರ್ಯರಿAದ ಷಟ್-ಸ್ಥಲ ಜ್ಞಾನೋಪದೇಶವಂ ಕೊಡಿಸಿ ಆಮೇಲೆ ರೇಣುಕರು ತಾವು ಸಾಂಬಲೋಕಕ್ಕೆ ದಯಮಾಡುವುದು ಸಮೀಪಿಸಿದ ಕಾರಣ” ಇತ್ಯಾದಿ. ಇದರಲ್ಲಿ ರುದ್ರಮುನಿಗೆ ಗುರುಲಿಂಗಣಾಚಾರ್ಯರೆAಬವರು ಲಿಂಗಧಾರಣ ಮಾಡಿದರೆಂದು ಹೇಳಲ್ಪಟ್ಟಿದೆ. ಆದರೆ ರುದ್ರಮುನಿಯು ಹುಟ್ಟಿದ್ದು ಬಸವಾದಿ ಪ್ರಮಥರು ಪ್ರಸಿದ್ಧಿಗೆ ಬರುವ ಪೂರ್ವದಲ್ಲಿ. ಆದರೆ ಪ್ರಭುದೇವರು ಈ ಪ್ರಾಂತಕ್ಕೆ ಬಂದದ್ದು ಬಸವೇಶ್ವರನು ಕಲ್ಯಾಣದಲ್ಲಿ ಪ್ರಸಿದ್ಧಿಗೆ ಬಂದ ಬಳಿಕ. ಅದರಿಂದ ಪ್ರಭುವಂತೋರ್ವರು ರುದ್ರಮುನಿಗೆ ಲಿಂಗಧಾರಣ ಮಾಡುವುದು ಸಂಭವನೀಯವಿರುವುದಿಲ್ಲ. ಆದರೆ ಹರಿಹರನು ಹೇಳಿದಂತೆ, ರೇವಣ...[ಪುಟ ೧೭] (ಪುಟ ೩೪೩) ಸಿದ್ಧೇಶ್ವರನೇ ರುದ್ರಮುನಿಗೆ ಲಿಂಗಧಾರಣವನ್ನು ಮಾಡಿರಲಿಕ್ಕೆ ಬೇಕು. ಮತ್ತು ರೇವಣಸಿದ್ಧೇಶ್ವರನೇ ತನ್ನ ತರುವಾಯ ಆತನಿಗೆ ತನ್ನ ಪಟ್ಟವನ್ನು ಕೊಟ್ಟಿರಬೇಕು. ಇದೇ ಹೆಚ್ಚಿಗೆ ಸಂಭವನೀಯವೆAದು ತೋರುತ್ತದೆ. ಈ ಪ್ರಕಾರ ರುದ್ರಮುನಿಯು ಕೇವಲ ವೀರಶೈವನಾದುದರಿಂದ, ಅವನಿಗೆ ದೀಕ್ಷೆಯನ್ನು ಕೊಟ್ಟ ರೇವಣಸಿದ್ಧೇಶ್ವರನೂ ಕೂಡ, ವೀರಶೈವ ಧರ್ಮವನ್ನು ಪಾಲಿಸುತ್ತಿದ್ದನೆಂಬ ಊಹೆಯು ತಾನಾಗಿಯೇ ಉಂಟಾಗುತ್ತದೆ. ಕೆಲವರು, ರೇವಣಸಿದ್ಧೇಶ್ವರರು ಮತ್ತು ರುದ್ರಮುನಿಗಳು ವೀರಶೈವರಲ್ಲವೆಂದು ವಾದಿಸುವುದುಂಟು. ಆದರೆ ಅವರಿಬ್ಬರ ಚರಿತ್ರೆಗಳನ್ನು ಪರೀಕ್ಷಿಸಿದಲ್ಲಿ ಅವರು ಕೇವಲ ವೀರಶೈವರಾಗಿ, ವೀರಶೈವ ಮತೋದ್ಧಾರ ಕಾರ್ಯಗಳನ್ನು ಘನತರವಾದ ರೀತಿಯಿಂದ ಮಾಡಿದಂತೆ ಕಂಡುಬರುತ್ತದೆ. ಆ ಕಾಲಕ್ಕೆ ಈಗಿನಂತೆ ವಿರಕ್ತರು, ಗುರುವರ್ಗದವರು ಎಂಬ ಕಲಹಗಳಿರಲಿಲ್ಲ. ಅವರೆಲ್ಲರೂ ವಚನಕಾರರ ತತ್ವಗಳನ್ನೇ ಪ್ರಸಾರ ಮಾಡುವವರಾಗಿದ್ದರೆಂದು ಪೂರ್ವದ ವೀರಶೈವೇತಿಹಾಸದಿಂದ ಕಂಡುಬರುತ್ತದೆ. ಫ. ಗು. ಹಳಕಟ್ಟಿ ಅವರು ರಚಿಸಿದಿದ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ
ಕ್ರಾಂತಿಗಂಗೋತ್ರಿ (ಅಕ್ಕನಾಗಮ್ಮನವರ ಚರಿತ್ರೆ) ಲಕ್ಕಪ್ಪ ಅ. ಶಿರಹಟ್ಟಿ ಶಿವಶಕ್ತಿ ಪ್ರಕಾಶನ :: ರಾಯಚೂರು
ಲಿಂ. ಚುಕ್ಕಿ ಶಿವಮ್ಮನವರ ಸ್ಮಾರಕ ಗ್ರಂಥಮಾಲೆ :
೧ ಪ್ರಕಾಶಕರು : ಚುಕ್ಕಿ ಬಂಧುಗಳು
ಶಿವಶಕ್ತಿ ಪ್ರಕಾಶನ, ಅಮರನಿವಾಸ, ಕೋಟೆ ರಾಯಚೂರು ಆಯ್ದ ಗ್ರಂಥ ಭಾಗಗಳು
ರುದ್ರಮುನಿಗಳಾಗಮನ
ಎರಡನೆಯದಿನ ಚಾವುಂಡರಾಯನ ಅಭಿಮಾನಕ್ಕೆ ಪೆಟ್ಟಾಗಿತ್ತು. ಉಳಿದ ಬಲದೊಡನೆ ಪಾಳಯವನ್ನು ಕಿತ್ತು ಹತ್ತು ಗಾವುದ ಹಿಂದೆ ಸರಿದು, ಹೆಚ್ಚಿನ ಸೇನೆ ಕಳಿಸಲು ಸೋವಿದೇವನಿಗೆ ಹೇಳಿಕಳುಹಿ ಕೃಷ್ಣಯ ತೀರದಲ್ಲಿ ಬೀಡುಬಿಟ್ಟನು. ಆಗ ಶರಣರು ಮೂಗಬಸವದ ಕಡೆಗೆ ಸಾಗಿದ್ದರು. ವೈರಿಗಳು ತಮ್ಮ ಬೆನ್ನು ಬಿಟ್ಟಿಲ್ಲ, ಹೆಚ್ಚಿನ ಸನ್ನಾಹದಿಂದ ಮತ್ತೆ ಬರಲಿದ್ದಾರೆಂಬುದು ಶರಣದಲದ ನಾಯಕರಿಗೆ ಗೊತ್ತಾಯಿತು. ಆದರೆ ಅದಕ್ಕೆ ಕೆಲವು ದಿವಸ ಹಿಡಿಯಬಹುದು. ನಾಗಮ್ಮ, ಚೆನ್ನಬಸವಣ್ಣ, ಮಾಚಯ್ಯ ಪ್ರಮುಖರು ಆಲೋಚನೆಗೊಳಗಾದರು. ಈಗ ಅವರಿಗೆ ಎರಡು ಮಾರ್ಗಗಳು ಮಾತ್ರ ಉಳಿದಿದ್ದವು.
೧. ಈ ಮಧ್ಯಂತರದ ಅವಕಾಶದಲ್ಲಿ ಬೇಗ ಬೇಗ ಪ್ರಯಾಣಿಸಿ ಸಹ್ಯದ ಹಳವುಗಳನ್ನು ಪ್ರವೇಶಿಸಿ ತಮ್ಮ ರಕ್ಷಣೆಯನ್ನು ಮಾಡಿಕೊಳ್ಳುವದು. ಗ್ರಂಥ ಭಾಂಡಾರವು ಈ ಮೊದಲೇ ಅಲ್ಲಿಯ ಉಳಿವೆಗೆ ಸಾಗಿಸಲ್ಪಟ್ಟಿದ್ದಿತು.
೨. ಈ ಮಧ್ಯಂತರ ಅವಕಾಶದಲ್ಲಿ ಜನಧನ ಸಾಮಗ್ರಿಗಳಿಂದ ಸೇನಾಬಲವನ್ನು ಹೆಚ್ಚಿಸಿಕೊಂಡು ಮೇಲೇರಿ ಬರುವ ಕಲಚೂರ್ಯ ದಳವನ್ನು ಸಂಪೂರ್ಣವಾಗಿ ಸೋಲಿಸಿ ನಿಷ್ಕಂಟಕವಾಗಿ ಪ್ರಯಾಣಮಾಡುವದು.
ಈ ವಿಚಾರದಲ್ಲಿ ಶರಣಧರ್ಮದ ಉಳಿವು ಅಳಿವುಗಳ ಸಮಸ್ಯೆಯೂ ಅಡಕವಾಗಿತ್ತು. ಚೆನ್ನಬಸವಣ್ಣ ಹಿಂಸೆಗೆ ನೊಂದವನಾಗಿದ್ದನು. 'ಹೇಗೂ ಗ್ರಂಥರಾಶಿ ಅರಣ್ಯ ಮಧ್ಯದ ಉಳಿವೆಯನ್ನು ಕಂಡಿದೆ. ತಾವೂ ಅಲ್ಲಿ ಹೋಗಿ ನೆಲಿಸಬೇಕು. ಗಹನಾರಣ್ಯದಲ್ಲಿ ವೈರಿಸೈನ್ಯ ಬರುವದು ಸುಲಭವಲ್ಲ.' ಎಂದು ಆತನ ವಿಚಾರ!
ನಾಗಲಾಂಬೆ ಇದನ್ನೊಪ್ಪಲಿಲ್ಲ. 'ಇದರಿಂದ ತಾವು ಪಾರಾಗಿ ಉಳಿಯಬಹುದು. ಮಹಾಮಹಾ ಅನುಭಾವಿಗಳು ಅನುಭವದ ಒರೆಗೆ ಹಚ್ಚಿ ರೂಪಿಸಿದ ಬಸವೇಶ ಅದರಂತೆ ಜೀವನದುದ್ದಕ್ಕೂ ಆಚರಿಸಿ ಸಿದ್ಧಾಂತಗೊಳಿಸಿದ ಶರಣಧರ್ಮದ ಕೈ ಬಿಟ್ಟಂತಾಗುವದು. ವೈರಿಗಳು ಅರಣ್ಯದಲ್ಲಿ ಬರದಿದ್ದರೂ ನಾಡಿನಲ್ಲಿ ಅಲ್ಲಲ್ಲಿ ನೆಲಿಸಿರುವ ಈ ಮತದ ಅನುಯಾಯಿಗಳನ್ನು ನಾಶಮಾಡದೆ ಬಿಡುವದಿಲ್ಲ. ಹೀಗೆ ತನ್ನನ್ನು ಕಾಪಾಡಿಕೊಳ್ಳದ ಸಮಾಜಧರ್ಮದ ಮೇಲೆ ಸಾಮಾನ್ಯರ ಶ್ರದ್ಧೆ ಉಳಿಯುವದಿಲ್ಲ. ಆದ್ದರಿಂದ ಈ ಧರ್ಮದವರಲ್ಲಿ ವೀರವೃತ್ತಿಯನ್ನುಂಟುಮಾಡಬೇಕು. ಭೀರುತ್ವವನ್ನು ಅಳಿಯಬೇಕು. ತತ್ವ ಘನತೆಯಲ್ಲಿ ಅಭಿಮಾನವಿಟ್ಟಿರುವ ಪಾಳಯಗಾರ ದೊರೆಗಳೂ ಮಂಡಲಾಧಿಕಾರಿಗಳೂ ನಮಗೆ ನೆರವಾಗುವರು. ಬಿಜ್ಜಳನ ರಾಜ್ಯಾಪಹಾರಕ್ಕೆ ಬಲಿಗೊಂಡ ಇವರೆಲ್ಲರು, ದುರ್ಬಲವಾಗುತ್ತಿರುವ ಕಲಚೂರ್ಯ ಆಧಿಪತ್ಯಕ್ಕೆ ನಿಷ್ಠರಾಗಿರುವದಿಲ್ಲ. ಸ್ವತಂತ್ರರಾಗಲು ಯತ್ನಿಸುತ್ತಿದ್ದಾರೆ. ಮೇಲೇರಿ ಬರುವ ಅನಿಷ್ಟ ಶಕ್ತಿಗಳನ್ನು ನಿಗ್ರಹಿಸುವಾಗ ಹಿಂಸೆ ಅನಿವಾರ್ಯ! ಮತ್ತೊಮ್ಮೆ ಇತ್ತ ಬಾರದಂತೆ ವೈರಿಬಲವನ್ನು ನಾವು ಒಮ್ಮೆ ಸೋಲಿಸಿ ಅಟ್ಟಬೇಕು. ಆಗಮಗಳಲ್ಲಿ ಹೇಳಿದ ಶೈವ ಪ್ರಭೇದದ ಹೆಸರೊಂದಾಗಿರುವ ವೀರಶೈವ ಎಂಬ ನಾಮವನ್ನು ವಿಶಾಲತತ್ವದ ಈ ಮತವು ಒಳಗೊಂಡಿದೆ. ಅದಕ್ಕೆ ಅನ್ವರ್ಥವಾಗುವಂತೆ ಆಚರಿಸಿ ಉಳಿದು ಬೆಳೆದು ಬಾಳಬೇಕು.” ಇದು ನಾಗಮ್ಮನ ವಿಚಾರ!
ಮಾಚಯ್ಯನ ವೀರವೃತ್ತಿಗೆ ಇದೇ ಸರಿಯೆನಿಸಿತು. ಕಿನ್ನರಯ್ಯ, ರೇಚಯ್ಯ, ವೃದ್ಧ ಕಕ್ಕಯ್ಯ ಇವರೆಲ್ಲರು ಇದನ್ನೇ ಅನುಮೋದಿಸಿದರು. ಕೇವಲ ತತ್ವ ಪ್ರಧಾನಮೂರ್ತಿ ಚೆನ್ನಬಸವಣ್ಣನು ಸಮಾಜಧರ್ಮದ ನೀತಿಗೆ ತಲೆವಾಗಿ ಒಪ್ಪಿಕೊಂಡನು. ಅವರೆಲ್ಲರು ಆತ್ಮರಕ್ಷಣೆಗಿಂತ ಧರ್ಮರಕ್ಷಣೆಯನ್ನು ಮುಂದಿಟ್ಟುಕೊಂಡು ಹೋರಾಡುವ ನಿಶ್ಚಯಮಾಡಿದರು.
ಈ ಹೊತ್ತಿಗೆ ಮಲೆನಾಡಿನಲ್ಲಿ ಮುಂಗಾರು ರಭಸದಿಂದ ಸುರಿಯಲಾರಂಭಿಸಿತ್ತು. ಆಗ ಅರಣ್ಯಮಧ್ಯದಲ್ಲಿ ವಸಹಾತು ಮಾಡುವದೂ ಸಾಧ್ಯವಿರಲಿಲ್ಲ. ಹೇಗೂ ವಿರೋಧಿಗಳು ಹಿಂದೆ ಸರಿದದ್ದರಿಂದ ಮಳೆಗಾಲ ಮುಗಿಯುವ ವರೆಗೆ ಶರಣದಲವು ಬೆಳವಲದಂಚಿನ ನಾಡಿನಲ್ಲಿಯೇ ಕಳೆಯುವದಾಯಿತು. ತಮ್ಮ ಪಾಳಯವನ್ನು ಒಂದೇ ಕಡೆಯಲ್ಲಿ ದೊಡ್ಡದಾಗಿಡುವದರಿಂದ ಅನ್ನ ಸಾಮಗ್ರಿಗಳ ಪೂರೈಕೆ ಕಷ್ಟದಾಯಕವಾಗುವದೆಂದು ಶರಣನಾಯಕರು ನಾಲ್ಕು ಗಾವುದಂತರದ ವಲಯದಲ್ಲಿಯ ಹಲವು ಗ್ರಾಮಗಳಲ್ಲಿ ಪಾಳಯಗಳನ್ನಿಟ್ಟರು. ನಾಗಮ್ಮ, ಚೆನ್ನಬಸವಣ್ಣ ಮುಂತಾದ ಪ್ರಮುಖರಿರುವ ಪಾಳಯವು ಕೇಂದ್ರ ಶಿಬಿರವಾಗಿದ್ದಿತು. ಆಯಾ ಪಾಳಯಗಳಲ್ಲಿ ಶರಣರು ತಂಡತಂಡವಾಗಿ ಶಾಂತಿಯಿಂದ ಶಿವಾನುಭವ ವಿಚಾರದಲ್ಲಿ ತೊಡಗಿದ್ದರು. ಎಲ್ಲ ಪಾಳಯಗಳ ನಾಯಕರು ಆಗಾಗ ಕೂಡಿ ಪರಿಸ್ಥಿತಿಯ ಪರಿಶೀಲನೆ ಮಾಡಿ ಮುಂದಿನ ಕಾರ್ಯಾಚರಣೆಯನ್ನು ನಿರ್ಧರಿಸುತ್ತಿದ್ದರು. ಚೆನ್ನಬಸವ ನಾಗಲಾಂಬೆಯರ ಬೋಧೆಗಳೂ ಸ್ವಯಾಚಾರ ಸಾಧನೆಗಳೂ ಸುತ್ತುಮುತ್ತಲಿನ ಜನರ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತಿದ್ದವು.
ನಾಗಮ್ಮನ ಸ್ವಾನುಭವ ಅರಳುತಲಿತ್ತು. ಯೋಗಸಾಧನೆಯ ಸೌಖ್ಯದಲ್ಲಿ ಕೊರತೆ ಇರಲಿಲ್ಲ. ಹೊರಗಿನ ಸಮಾಜಧರ್ಮದ ಪ್ರಜ್ಞೆಯೂ ಪೂರ್ಣವಾಗಿತ್ತು. ಯಾವಾಗ ಏನು ಮಾಡಿದರೂ ಅದರಲ್ಲಿಯೇ ಯೋಗ ಪಡೆಯುತ್ತಿದ್ದಳು. ಮಹಾಯೋಗಿಣಿ ಆ ಶಿವಯೋಗಿಣಿ! ಚೆನ್ನಬಸವಣ್ಣನಂತೂ ಸುಜ್ಞಾನದಾಗರ ಅವನ ಕೀರ್ತಿ ಆ ನಾಡಿಗೆ ಹೊಸದಲ್ಲ. ಆ ಸನ್ನಿಧಿಯ ದರ್ಶನ ಹೊಸದು. ಸಮೀಪದ ಅನುಭಾವಿಗಳೂ ರಾಜಕಾರಣಿಗಳೂ ಬಂದು ಹೋಗುತ್ತಿದ್ದರು. ಅನುಭಾವಿಗಳು ಆ ತಾಯಿ ಮಗನ ಪರಮಾನುಭಾವ ಪರಿಪೂರ್ಣತೆಯನ್ನು ಮೆಚ್ಚಿದ್ದರೆ, ರಾಜಕಾರಣಿಗಳು ನಾಗಮ್ಮನ ವ್ಯಾವಹಾರಿಕ ಪ್ರಸಂಗಾವಧಾನವನ್ನೂ ನಿಷ್ಕಪಟದ ಮುಂಧೋರಣೆಯನ್ನೂ ಮೆಚ್ಚಿದ್ದರು.
ಮೊದಲನೆಯ ಪ್ರಹರದ ಹೊತ್ತು. ಚೆನ್ನಬಸವಣ್ಣನು ಕರಣ ಹಸಿಗೆಯ ದ್ವಿತೀಯ ಪ್ರತಿಯನ್ನು ಪರಿಶೀಲಿಸುತ್ತ ಅದರ ಕೆಲಸಂದರ್ಭಗಳನ್ನು ಮಾಚಯ್ಯನೊಡನೆ ವಿವೇಚಿಸುತ್ತ ತನ್ನ ಚಿಕ್ಕ ಗೂಡಾರದಲ್ಲಿ ಕುಳಿತಿದ್ದನು. ಜಂಗಮರ ತಂಡವೊಂದು ದಿನ್ನೆಯಿಳಿದು ಬರುತ್ತಿದೆಯೆಂದು ಹೊರಗಿನವರು ಒಳಗೆ ಬಂದು ವರದಿಮಾಡಿದರು. ಕೂಡಲೆ ಅವರಿಬ್ಬರು ಹೊರಗೆ ಬಂದು, ನೋಡಿದರು. ಸನ್ಮಾನಿಸಿ ದಾರಿತೋರಿ ಕರೆತರಲು ರೇಚಯ್ಯನನ್ನು ಮುಂದಕ್ಕೆ ಕಳುಹಿ ತಾವು ನಿರೀಕ್ಷಿಸುತ್ತ ನಿಂತರು. ಹರಹರಮಹಾದೇವ ಎನ್ನುತ್ತ ಆ ಗುಂಪು ಸನಿಹಕ್ಕೆ ಬಂದಿತು. ಅಲ್ಲಿಂದಲೇ ಕುದುರೆಯಿಂದಿಳಿದು ರುದ್ರಮುನಿದೇವರು ಮುಂದೆ ಬಂದರು. ಮಾಚಯ್ಯನ ನೆರವಿನಿಂದ ಗುರ್ತಿಸಿದ ಚೆನ್ನಬಸವಣ್ಣನು ಕೈ ಮುಗಿದುಕೊಂಡು ಮುಂದೆ ಹೋದನು. ಅವರಿಬ್ಬರು ಪರಸ್ಪರ ವಂದಿಸಿದರು. ಮಾಚಯ್ಯನೂ ಶರಣು ಶರಣೆಂದು ಬಾಗಿದನು. ಆದರದಿಂದ ಬರಮಾಡಿಕೊಂಡು ಗೂಡಾರದೊಳಗೆ ಕರೆದೊಯ್ದರು.
ರುದ್ರಮುನಿದೇವರ ಉತ್ಸಾಹದ ವಾಣಿ ಹೊರಹೊಮ್ಮಿತು :
"ಚೆನ್ನಬಸವಣ್ಣನವರೇ ನಿಮ್ಮ ಮೇಲಾಗುತ್ತಿರುವ ದಾಳಿಯನ್ನೂ ನೀವು ಅದನ್ನು ಧೈರ್ಯ-ಶೌರ್ಯಗಳಿಂದ ಎದುರಿಸಿ ಒಮ್ಮೆಟ್ಟಿಸಿದುದನ್ನೂ ನಾವು ಸಂಚಾರದಲ್ಲಿಯೇ ಕೇಳಿದೆವು. ಧರ್ಮರಕ್ಷಣೆಗಾಗಿ ನೀವು ಹೋರಾಡುತ್ತಿರುವಾಗ ನನ್ನಿಂದಾಗುವ ಸೇವೆ ಸಲ್ಲಿಸಲು ನಾನಿತ್ತ ಬಂದೆನು.”
"ಬಹಳ ಸಂತೋಷ ಬುದ್ಧಿ, ಧರ್ಮವು ಧರ್ಮಮಾರ್ಗದಿಂದಲೇ ರಕ್ಷಿಸಲ್ಪಡಬೇಕು. ಮುಂದಿನ ದಾರಿಯನ್ನು ತಾವು ತೋರಿಸಬೇಕು.”
"ದಾರಿ ಸ್ಪಷ್ಟವಿದೆ. ಅದನ್ನೇ ನೀವು ಅನುಸರಿಸುತ್ತಿದ್ದೀರಿ, ಚೆನ್ನಬಸವಣ್ಣನವರೇ, ಚಿಂತಿಸಬೇಕಾಗಿಲ್ಲ; ಸಾಮಾನ್ಯರೇ ಈ ಮಾಚಯ್ಯನವರು! ಇಂತಹರಿದ್ದಾರಲ್ಲ. ಇವರು ಭಾವಬಲ್ಲಿದರಾದಂತೆ ಬಾಹುಬಲ್ಲಿದರೂ ಆಗಿದ್ದಾರೆ. ದ್ರೋಹಿಗಳ ಮೇಲೆ ಮಾಚಯ್ಯ ಖಡ್ಗವೆತ್ತಿದುದನ್ನು ಕಂಡವರು ವೀರಭದ್ರ ಹೀಗೆಯೇ ಇದ್ದಿರಬಹುದೆಂದು ತರ್ಕಿಸುತ್ತಾರಂತೆ. ಅವ್ವ ಎಲ್ಲಿ ? ಅವರ ಹೆಸರು ಬಹಳವಾಗಿ ಬಹುದೂರ ಕೇಳಿಸುತ್ತಿದೆ.”
"ಆಗಲೇ ಅರ್ಚನೆ ತೀರಿಸಿಕೊಂಡು ಅಡುಗೆಯ ಗೂಡಾರಕ್ಕೆ ಹೋಗಿದ್ದಾರೆ. ಪ್ರಸಾದವ್ಯವಸ್ಥೆ ನೋಡಿಕೊಳ್ಳುತ್ತಿದ್ದಾರೆ.” ರೇಚಯ್ಯ ಹೇಳಿದನು.
"ಅಲ್ಲಿಯೇ ಹೋಗಿ ಕಾಣುವಾ, ಬನ್ನಿ.”
ಎದ್ದು ನಡೆದರು ರುದ್ರಮುನಿಗಳು. ಕೆಳಗೆ ಮಾವಿನ ತೋಪಿನಲ್ಲಿತ್ತು ಪ್ರಸಾದದ ಛಾವಣಿ. ಚೆನ್ನಬಸವಣ್ಣ, ಮಾಚಯ್ಯ ಮುಂದಾಗಿ ನಡೆದರು. ಉತ್ಸಾಹ ಉಕ್ಕುವ ರುದ್ರಮುನಿಗಳು ಸುಮ್ಮನೆ ಸಾಗಿರಲಿಲ್ಲ :
"ನಾಗಮ್ಮನವರ ಜೀವನವೊಂದು ಮಹಾನದಿಯ ಪ್ರವಾಹ. ಅದು ಹರಿಯದ ಭೂಮಿಯಿಲ್ಲ; ತಣಿಸದ ಜನವಿಲ್ಲ. ಅದರ ಸಂಪರ್ಕದಿಂದ ಅಜ್ಞಾನದ ಮರುಭೂಮಿ ಸುಜ್ಞಾನದ ಫಲ ಬೆಳೆಯಿತು. ಕೊಳಚಿ-ಕಂಟಕಗಳು ಕೊಚ್ಚಿಹೋದವು. ಇನ್ನೂ ಸಾಗರ ಸೇರುವ ವರೆಗೆ ಈ ನದಿಯ ಉದಕದಿಂದ ಆತ್ಮತೃಪ್ತಿ ಪಡೆವವರದೆಷ್ಟು ಜನರೋ ? ಕಲ್ಯಾಣದಿಂದ ಹೊರಬಿದ್ದ ಶರಣ-ಶರಣೆಯರು ಈ ತಾಯಿಯ ಕೀರ್ತಿಯನ್ನು ಹಾಡುತ್ತಿದ್ದಾರೆ. ನಾವು ನಿನ್ನೆ ಮೊನ್ನೆ ಬರುವಾಗ ಈ ಭಾಗದ ಜನರು ಅಲ್ಲಲ್ಲಿ ನಮ್ಮನ್ನು ಬರಮಾಡಿಕೊಂಡು ಧರ್ಮರಕ್ಷಣೆಗಾಗಿ ತಮ್ಮ ಪಾಲನ್ನು ಸಲ್ಲಿಸುವ ಸಿದ್ಧತೆ ನಡೆಸಿದ್ದುದು ಕಂಡುಬಂದಿತು.”
ಹೊರಗಿನ ದನಿ ಕೇಳಿ ಬಾಗಿಲಿಗೆ ಬಂದು ಕಂಡು, ನಾಗಮ್ಮ ಸಂತಸದಿಂದ ಮಹಿಗೆ ಮೈಯಿಕ್ಕಿ ವಂದಿಸಿದಳು. ನೆಲಮುಟ್ಟಿ ಬಾಗಿ ಆ ತಾಯಿಯ ವಂದನೆ ಸ್ವೀಕರಿಸಿದರು ರುದ್ರಮುನಿದೇವರು.
"ಭಲಾ, ತಾಯಿ, ಚೆನ್ನಬಸವಣ್ಣನ ಷಟ್ಸ್ಥಲ ಧ್ವಜ ಬಿರುಗಾಳಿಗೆ ಸಿಲುಕಿತ್ತು. ನಿನ್ನ ಸುಭದ್ರ ಪವಿತ್ರ ಹಸ್ತವನ್ನು ಕೊಟ್ಟು ಕಾಪಾಡಿದೆ.”
"ನಾನು ಅಬಲೆ ಸ್ವಾಮೀ, ಇವರೆಲ್ಲ ವೀರರು. ಅದರಲ್ಲಿ ನಿಷ್ಠೆ ತಾಳಿದವರಿದ್ದಾರೆ. ಆ ಗಾಳಿ ಇನ್ನೂ ಊದುತ್ತಿದೆ.”
"ಊದಲಿ, ಅದರ ಯೋಚನೆಯನ್ನೆಲ್ಲ ನಾನು ಹೇಳುತ್ತೇನೆ. ಇನ್ನು ಚಿಂತೆ ಬೇಡಮ್ಮ !”
ಒಳಗೆ ಆ ಮಗ್ಗಲಿಗಿದ್ದ ಗಂಗಮ್ಮ ನೋಡಿ, ಅವಸರದಿಂದ ಬಂದು ಗುರುಚರಣದ ಮೇಲೆ ತಲೆಯಿಟ್ಟರು. ಕಣ್ಣೀರಿನ ಬಿಸಿ ತೊಟ್ಟುಗಳೆರಡು ಅವರ ಪಾದದ ಮೇಲೆ ಬಿದ್ದವು.
"ಏಳು ಮಗಳೇ, ಬಸವಣ್ಣನವರು ಬಯಲಾದುದಕ್ಕೆ ನೀನು ವ್ಯಥೆಗೊಂಡಿರುವದು ಸಹಜವದೆ. ನೀನವರ ಮೂರ್ತಿಯನ್ನು ನಿನ್ನಂತರಂಗದಲ್ಲಿ ನೋಡು; ಹೊರಗೆ ಹರಡಿದ ನಿನ್ನ ಪತಿಯ ಬೆಳಕನೋಡು. ತಗ್ಗು ದಿನ್ನೆಯಾಗಿ ಬೆಳೆಬಾರದಂತಾಗಿರುವ ವೀರಶೈವದ ಹೊಲವನ್ನು, ಬಸವಣ್ಣನವರು ಸಮನಾಗಿಸಿ, ಮುಳ್ಳು ಪೊದೆ, ಕಸಕಡ್ಡಿ, ಕಲ್ಲುಗುಡ್ಡೆಗಳನ್ನು ಕಿತ್ತು ತೆಗೆದು ನಿತ್ಯ-ಸತ್ಯಶಾಂತಿಯ ಫಲಕೊಡುವ, ಸದ್ಭಕ್ತಿ-ಸದಾಚಾರ-ಸೇವೆ ಕಾಯಕ-ದಾಸೋಹಗಳ ಬೆಳೆ ಬಿತ್ತಿದ್ದಾರೆ. ಆ ಬೆಳೆಯನ್ನು ನಾವೆಲ್ಲ ಕಾಪಾಡಿಕೊಳ್ಳಬೇಕು. ಅದರಲ್ಲಿ ನೀನೀಗಾಗಲೇ ಪಾಲುಗೊಂಡು ಈ ಹಿರಿಯಯೊಡನೆ ಮುಂದುವರಿದಿರುವೆ. ಅನುಭಾವಿಗಳ ಮಹತ್ವ ಆಪತ್ತಿನಲ್ಲಿ ಗೊತ್ತಾಗುವದು. ಇತ್ತೀಚಿನ ನಿಮ್ಮ ಸಂಕಟಗಳಲ್ಲಿ ನೀವು ತಾಳಿದ ನಿಲವಿನಿಂದ ನಿಮ್ಮೆಲ್ಲರ ಹೆಸರು ಬಹುದೂರ ಕೇಳುತ್ತವೆ. ನೀನು ಕರ್ತವ್ಯದ ಸಮ್ಮುಖದಲ್ಲಿರುವೆ. ದುಃಖಿಸಬೇಡ ಗಂಗಮ್ಮ ತಾಯಿ.”
"ಆಗಲಿ ಅಪ್ಪಾ ! ನಿಮ್ಮ ಸೂಚನೆ ಶಿರಸಾಮಾನ್ಯ !”
ಬಾಲ್ಯದಲ್ಲಿ ಗಂಗಾಂಬೆ ತಂದೆಯೊಡನೆ ಸಂಗಮದಲ್ಲಿ ಲಿಂಗಧಾರಣೆಮಾಡಿಕೊಂಡಿದ್ದಳು. ಕಲ್ಯಾಣದಲ್ಲಿ ಮದುವೆಯ ಮೊದಲು ರುದ್ರಮುನಿಗಳಿಂದ ಅನುಗ್ರಹಿತಳಾಗಿ ಜ್ಞಾನೋಪದೇಶ ಪಡೆದಿದ್ದಳು. ಅವರು ಜ್ಞಾನಗುರುಗಳಾಗಿದ್ದರು.
ಮಾಚಯ್ಯ ಮುಂದೆ ಬಂದು ಹೇಳಿದನು:
"ದೇವರು, ಪ್ರಯಾಣದ ಆಯಾಸವಾಗಿದೆ ತಮಗೆ ತಮ್ಮ ಸ್ನಾನದ ವ್ಯವಸ್ಥೆಯಾಗುತ್ತಿದೆ. ಗಣಂಗಳನ್ನೆಲ್ಲ ಸ್ನಾನಕ್ಕೆ ಕಳಿಸಿದ್ದೇನೆ. ಅರ್ಚನೆ-ಅರ್ಪಿತಳಾಗಿ ಸ್ವಲ್ಪ ವಿಶ್ರಾಂತಿಗೊಳ್ಳುವದಾಗಬೇಕು. ಆಮೇಲೆ ಸದ್ಯದ समस्याओं ಪರಿಹಾರಕ್ಕೆ ಸಾವಧಾನವಾಗಿ ಸರಿಯಾಗಿ ಆಲೋಚಿಸಬೇಕಾಗಿದೆ.”
"ಸರಿ ಹಾಗೆ ಆಗಲಿ” ರುದ್ರಮುನಿಗಳು ತಮ್ಮ ಸಾಮಾನುಗಳತ್ತ ನಡೆದರು ಚೆನ್ನಬಸವಣ್ಣನೊಡನೆ. ಗಂಗಮ್ಮ ಪೂಜಾಸ್ಥಳದಲ್ಲಿ ಸಲಕರಣೆಗಳ ಜೋಡಣೆ ಮಾಡಿದಳು. ನಾಗಮ್ಮ ಪಾಕಶಾಲೆಯ ಕೆಲಸ ಜಾಗ್ರತಗೊಳಿಸಿದಳು.
ಕಾದರವಳ್ಳಿಯ ಕಾಳಗ
ಬೇಗಿನ ಹೊತ್ತಿನಲ್ಲಿ ಮುಂದಿನ ಗೂಡಾರದಲ್ಲಿ ಶರಣಪ್ರಮುಖರು ಸೇರಿದ್ದರು. ಪರಿಸ್ಥಿತಿಯ ವಿವೇಚನೆ ನಡೆದಿತ್ತು. ಚೆನ್ನಬಸವಣ್ಣನ ಪ್ರಶ್ನೆ :
"ಯುದ್ಧವು ಧರ್ಮಸಮ್ಮತವೇ ? ಮತಾಚರಣೆಗೆ ಇದು ಅನಿವಾರ್ಯವಾದ ವಿಧಾನವೇ ?”
"ಸಾಮಾನ್ಯವಾಗಿ ಸಮ್ಮತವಾದುದಲ್ಲ; ಅಗತ್ಯ ವಿಧಾನವೂ ಅಲ್ಲ. ಕೊನೆಯ ಪಕ್ಷಕ್ಕೆ ಧರ್ಮಸಮ್ಮತವಾಗುವದು. ಧರ್ಮವು ದೇಶಕಾಲ ಪರಿಸ್ಥಿತಿಯನ್ನು ಅನುಸರಿಸಿ ಬದಲಾಗುವದು. ಯಾಕೆ ಅಮ್ಮನವರೇ ನೀವು ಹೇಳಿರಿ.” ರುದ್ರಮುನಿಗಳು ನಾಗಮ್ಮನವರನ್ನು ಕೇಳಿದರು.
"ಹೌದು ದೇವರು, ಮತಾಚರಣೆಗೆ ಮೂರು ವಿಧಾನಗಳು : ಅದರ ನೈತಿಕ, ತಾತ್ವಿಕ ವಿಧಾನಗಳು ನಿತ್ಯವಾದವುಗಳು. ಅವು ದರ್ಶನ ಸ್ವರೂಪ; ಬದಲಾಗಬಾರದು. ಮೂರನೆಯದಾದ ಧಾರ್ಮಿಕ ವಿಧಾನವು ಕಾಲಪರಿಸ್ಥಿತಿಗೆ ಅಧೀನವಾಗಿ ಹೊಂದಿಕೊಳ್ಳುತ್ತ ಸಾಗಿ ನೈತಿಕ ತಾತ್ವಿಕ ವಿಧಾನಗಳಿಗೆ ರಕ್ಷಣೆ ನೀಡಬೇಕು. ಇದನ್ನೇನು ಚೆನ್ನಬಸವಣ್ಣ ಅರಿಯರೆ? ಅವರು ಜೀವಹಿಂಸೆಗೆ ರೋಷಿಕೊಂಡಿದ್ದಾರೆ. ರಕ್ಷಣೆ ಈಗ ಅಗತ್ಯವಾಗಿದೆ.”
"ಅದೇ ಮುಖ್ಯ ! ವಿರೋಧಿಗಳು ಒಮ್ಮೆ ಈ ನಿಮ್ಮ ದಳವನ್ನು ಸದೆಬಡಿದು ಚದುರಿಸಿದರೆಂದರೆ ತೀರಿತು ಕಳ್ಕೊಡೆಯಿತು ! ದೇಶದಲ್ಲಿಯ ಲಿಂಗವಂತರ ಮಠಗಳು ಸಂಸ್ಥೆಗಳು ಅಲ್ಲಲ್ಲಿಯ ವಿರೋಧಿಗಳ ಉಪಟಳದಿಂದ ನಾಶವಾಗಿ ಬಿಡುವವು. ಬಸವಣ್ಣನವರು ಬಹುಮುಖದಿಂದ ಸ್ಥಾಪಿಸಿದ ಸಮಾನತೆ ಹಾಳಾಗಿ ಹೋಗುವದು; ಸಮಾಜಶೋಷಣೆ ಮತ್ತೆ ನಡೆಯುವದು. ನಿರಂತರ ಹಿಂಸೆಯನ್ನು ತಡೆಯುವದಕ್ಕಾಗಿ ಕೊನೆಗೆ ತಾತ್ಕಾಲಿಕ ಹಿಂಸೆ ಅಗತ್ಯ, ಅದು ಕ್ಷಮ್ಯ ! ಇದರ ಹೊರತು ಹಿಂಸೆ ಇಲ್ಲಿ ಯಾರಿಗೆ ಸೇರುತ್ತದೆ ? ರಕ್ತರಂಜನೆ ಯಾರಿಗೆ ಬೇಕಾಗಿದೆ ?”
ಚೆನ್ನಬಸವಣ್ಣನವರು ರುದ್ರಮುನಿಗಳ ತೀಕ್ಷ್ಯದೃಷ್ಟಿಯನ್ನು ಎದುರಿಸದಾದರು. ತತ್ವಸಿದ್ಧಾಂತ ಮುಖ್ಯ ! ಅದರ ರಕ್ಷಣೆಗೆ ಯುದ್ಧ ಅನಿವಾರ್ಯವಾದರೆ ಆಗಲಿ ! ಎನ್ನ ತೊಡಗಿತ್ತವನ ಮನಸ್ಸು.
"ನಮ್ಮ ಈ ಹೋರಾಟಕ್ಕೆ ಲೋಕಾಭಿಪ್ರಾಯ ಅನುಕೂಲವಾಗಿದೆಯೇ ಸ್ವಾಮೀ ?” ತಮ್ಮವರ ಎದೆಗಟ್ಟಿಗೊಳಿಸುವದಕ್ಕೆ ನಾಗಮ್ಮ ಬೇಕಂತೆ ಕೇಳಿದಳಿದನ್ನು.
"ಓಹೋ ಅನುಕೂಲವಿಷ್ಟೇ ಅಲ್ಲ, ವಿಪುಲ ಸಹಾಯವೂ ಸಲ್ಲಲಿದೆ. ಬಸವಣ್ಣನವರ ಆರ್ಥಿಕ ಮತ್ತು ಸಾಮಾಜಿಕ-ನೂತನ ವ್ಯವಸ್ಥೆಗೆ ಮೆಚ್ಚಿದ ಮಾಂಡಲಿಕರು-ಸಾಮಂತರು ಕಲ್ಯಾಣದ ಆಧಿಪತ್ಯಕ್ಕೆ ಅಂಕಿತರಾಗಿದ್ದರು. ಬಿಜ್ಜಳನು ಸ್ವಾರ್ಥಿಗಳ ಸಹಾಯ ಪಡೆದು ಚಾಲುಕ್ಯಸಿಂಹಾಸನವನ್ನು ಅಪಹರಿಸಿದ್ದರಿಂದ ಅಸಹ್ಯಪಟ್ಟ ಇವರೆಲ್ಲರು ಸ್ವತಂತ್ರರಾಗಲು ಯತ್ನಿಸಿ, ಸೋವಿದೇವನ ಅಧಿಕಾರವನ್ನು ನಿರಾಕರಿಸುತ್ತಿದ್ದಾರೆ. ನೂತನ ಸಮಾಜ ಧರ್ಮವನ್ನು ರಕ್ಷಿಸುವದಕ್ಕಲ್ಲದೆ ಸೋವಿದೇವನ ಬಲವನ್ನು ಮುರಿಯುವದಕ್ಕೂ ಅವರೆಲ್ಲರು ನಿಮಗೆ ಸಹಾಯ ಮಾಡುವದೆಂದು ನಿಶ್ಚಯಿಸಿದ್ದಾರೆ.
ನಾಗಮ್ಮ ಕೃತಜ್ಞತೆಯಿಂದ ನುಡಿದಳು:
"ಧರ್ಮರಕ್ಷಣೆಗೆ ಜನರಲ್ಲಿ ಉಂಟಾದ ಈ ಹುಮ್ಮಸು ತಮ್ಮ ಉಪದೇಶದ ಪರಿಣಾಮವೂ ಆಗಿರಬಹುದು. ಸೌದತ್ತಿಯ ರಟ್ಟದೊರೆಗಳು ಐವತ್ತು ಬಂಡಿಗಳಲ್ಲಿ ಧಾನ್ಯಗಳನ್ನು ಹೇರಿ ಕಳಿಸಿದ್ದಾರೆ. ಸಂಪದ್ಗ್ರಾಮದ ಒಡೆಯರು ತಮ್ಮ ಕಣಜಗಳನ್ನು ನಮ್ಮ ದಲದವರಿಗೆ ಮುಕ್ತದ್ವಾರವಿಟ್ಟಿದ್ದಾರೆ. ಪಲಾಸಿಕಾ ನಂದಿಗಡ ಕಂಪಣಗಳ ಅಧಿಪತಿಗಳು ಭತ್ತ ಕುಟ್ಟಿಸಿ ಸಾಕಷ್ಟು ಅಕ್ಕಿಯನ್ನೇ ಹೇರಿ ಕಳಿಸಿದ್ದಾರೆ.”
"ಸಹಜವದೆ ನಾಗಮ್ಮನವರೆ, ಇವರಿಗೆ ಹಾಗೆ ಗೋವೆಯ ಕದಂಬರ ಕೇಶಿರಾಜರ ಆಜ್ಞೆಯಾಗಿದೆ. ಕೇಶಿರಾಜರ ತಂದೆ ಶಿವಚಿತ್ತರಾಜರು ಬಸವಣ್ಣನವರ ಭಕ್ತರು ಮಿತ್ರರು ಆಗಿದ್ದರು. ಬಿಜ್ಜಳನ ರಾಜ್ಯದಾಹವನ್ನು ಎದುರಿಸಿದ ಸಾಮಂತರಲ್ಲಿ ಅವರೇ ಮೊದಲಿಗರು.”
"ನಮ್ಮ ಗ್ರಂಥಭಾಂಡಾರವು ಜಯಕೇಶಿರಾಜರ ರಕ್ಷಣೆಯಲ್ಲಿಯೇ ಸುರಕ್ಷಿತವಾಗಿದೆ” ಚೆನ್ನಬಸವಣ್ಣನೆಂದನು.
"ಉಳಿವೆಯ ವಸಹಾತಕ್ಕೆ ಅವರೇ ಮುಖ್ಯಾಧಾರ” ಮಾಚಯ್ಯ ಹೇಳಿದನು. ಉತ್ಸಾಹದಿಂದ ಮಾತು ಮುಂದುವರಿಸಿದರು ರುದ್ರಮುನಿಗಳು.
"ಕರವೀರಪುರ, ಕರ್ಹಾಡಗಳ ಶಿಲಾಹಾರ ರಾಜರು ತಮ್ಮ ತಲೆಯ ಮೇಲೆ ಕಲಚೂರ್ಯ ಪ್ರಭುತ್ವವನ್ನು ಒಪ್ಪುವ ಸಂಭವ ಹೇಗೆ ? ಅವರೂ ಅದನ್ನು ನಿರಾಕರಿಸಿ ಸ್ವಾತಂತ್ರ್ಯವನ್ನು ಘೋಷಿಸಿದ್ದಾರೆ. ಕರ್ಹಾಡದ ವಿಜಯಾರನು ಚಾಲುಕ್ಯ ಮಹಾರಾಣಿಯಾಗಿದ್ದ ತಮ್ಮ ತಂಗಿಯ ಅಪಚಾರ ಮಾಡಿದ ಬಿಜ್ಜಳನ ಮೇಲೆ ಕ್ರೋಧಸಂತಪ್ತನಾಗಿದ್ದನು. ಅವನ ತರುಣ ಪುತ್ರ ರವಿದೇವನು ನಿಮ್ಮೊಡನೆ ಕೂಡಿ ಸೋವಿದೇವನ ಬಲವನ್ನು ಮುರಿಯಲು ಆತುರನಾಗಿದ್ದಾನೆ. ಇನ್ನು ಸೋವಿದೇವನ ಸೈನ್ಯವು ಸೋನ್ನಲಾಪುರವನ್ನು ದಾಟಿ ಬರುವದನ್ನು ಯಾವ ಮಾಂಡಲೀಕನೂ ಸಹಿಸುವದಿಲ್ಲ. ಕ್ರಾಂತಿಯ ಪರಿಣಾಮವಾಗಿ ನೀವೀಗ ಸೋವಿದೇವನ ರಾಜ್ಯದಲ್ಲಿಲ್ಲ. ನೀವು ಈ ಪ್ರದೇಶದಲ್ಲಿ ಬೇಕಾದ ಹಾಗೆ ಸಂಚರಿಸಬಹುದು. ಮತಪ್ರಚಾರ ನಡಿಸಬಹುದು. ಶ್ರಾವಣವನ್ನು ಮುಗಿಸಿ ಮಲೆಯಲ್ಲಿ ಮಳೆ ಕಡಿಮೆಯಾದ ಬಳಿಕ ಅಲ್ಲಿ ವಸಹಾತು ಮಾಡಲಿಕ್ಕೂ ತೆರಳಬಹುದು.”
"ಚಾವುಂಡರಾಯನು ಮತ್ತೆ ಬರುವದು ನಿಶ್ಚಿತವಿದೆ ಸ್ವಾಮೀ"- ಮಾಚಯ್ಯ ಎಂದನು.
"ಅನಿಶ್ಚಿತವೇ ಇರಲಿ. ನೀವೂ ಯುದ್ಧ ಜೋಡಣೆಯನ್ನು ಕಾಯ್ದುಕೊಂಡಿರಿ. ಇದುವರೆಗೆ ಹೇಳಿದ ಸಹಾಯ ಸಿಗುವಂತೆ ನಾನೂ ನೋಡಿಕೊಳ್ಳುವೆ.”
ಮುಂದೆ ಮಾತು ಚೆನ್ನಬಸವಣ್ಣನ ಮುಂದಿರುವ ಕರಣಹಸಿಗೆಯ ವಿಷಯದ ಕಡೆಗೆ ಹೊರಳಿದವು.
ರುದ್ರಮುನಿಗಳು ನಾಲ್ಕು ದಿನ ಮಾಚಯ್ಯ ಮೊದಲಾದವರೊಂದಿಗೆ ತಿರುಗಾಡಿ ಮೂಗಬಸವ, ಹುಣಸೀಕಟ್ಟಿ, ತುರಮರಿ, ಹಿಂಚಲ, ಸಂಪಗಾಂವಿ, ಮುರಕೀಭಾವಿ, ನಂದೀಹಳ್ಳಿ, ಚಿವುಟಗುಂಡಿ ಗ್ರಾಮಗಳಲ್ಲಿಯ ಎಲ್ಲ ಪಾಳಯಗಳನ್ನು ನೋಡಿಕೊಂಡು ಬಂದರು. ಆಗ ಅಲ್ಲಲ್ಲಿ ಧಾರ್ಮಿಕ ಕರ್ತವ್ಯದರಿವನ್ನೂ ಅದರಿಂದ ಲೋಕಾನುರಾಗ ಉಂಟಾದುದನ್ನೂ ವಿವರಿಸಿ, ಧೈರ್ಯವನ್ನು ಗಣಾಚಾರದ ಯೋಧರಲ್ಲಿ ಮೂಡಿಸಿದರು. ನಾಯಕರ ಸಂದೇಹ ಸಮಸ್ಯೆಗಳಿಗೆ ಪರಿಹಾರ ನೀಡಿದರು. ಹುಣಸೀಕಟ್ಟಿ ಪಾಳಯದ ಹತ್ತಿರ ಅನುಕೂಲ ಸ್ಥಳ ಕಂಡದ್ದರಿಂದ ತಮ್ಮ ಜಪಾನುಷ್ಠಾನಗಳು ಅಲ್ಲಿ ನಡೆಯಬೇಕೆಂದು ನಿರ್ಚಯಿಸಿಕೊಂಡರು. ಇದರಿಂದ ಆ ಭಾಗದಲ್ಲಿಯೂ ಜಾಗ್ರತೆ ಭದ್ರತೆ ಉಂಟಾಗಲು ಸಹಾಯವಾಯಿತು. ಆ ಸ್ಥಳದಲ್ಲಿಯ ರುದ್ರಮುನಿ ಗವಿಯು ಅದಕ್ಕೆ ನಿದರ್ಶನವಾಗಿ ಈಗಲೂ ಉಳಿದಿದೆ.
ಶ್ರಾವಣಮಾಸದ ಗಣಪರ್ವಗಳಿಗೆ ನಾಗಮ್ಮ, ಚೆನ್ನಬಸವಣ್ಣ, ಮಾಚಯ್ಯ ಇವರಿಗೆ ಎಡೆವಿಡದೆ ಬಿನ್ನಹ ಬರುತ್ತಿದ್ದವು. ಅವರ ಅನುಭಾವದ ವಾಣಿಯನ್ನು ಕೇಳಲು ಆತುರರಾಗಿ ಜನ ಕಾದಿರುತ್ತಿದ್ದರು. ನಾಗಮ್ಮ ಹೋದಲ್ಲೆಲ್ಲ ನಾಡಿನ ಸ್ತ್ರೀಯರು ಧರ್ಮಾಚಾರದಲ್ಲಿ ಹಿಂದುಳಿದುದನ್ನೇ ವಿವೇಚಿಸಿ, ಜಾಗ್ರತೆಗೊಳಿಸಿ ನೀತಿತತ್ವಗಳನ್ನು ಉಪದೇಶಿಸಿ ಅವರ ಮನ ತಣಿಯುವಂತೆ ಮಾಡುತ್ತಿದ್ದಳು. ಅದರಿಂದ ಸ್ಫೂರ್ತಿಗೊಂಡ ಸ್ತ್ರೀಯರು ಪುರುಷರ ಭಕ್ತಿಕ್ರಿಯೆಗಳಿಗೆ ಪೂರಕವಾಗಿ ನಿಲ್ಲುತ್ತಿದ್ದರು. ನಾಗಲಾಂಬೆಯ ಪ್ರಭಾವವು ಆ ಪ್ರದೇಶದಲ್ಲಿ ತುಂಬಾ ಮೂಡಿತು. ಆಕೆಯ ಮುಖ್ಯ ಶಿಬಿರವಿದ್ದ ಸ್ಥಳದಲ್ಲಿ ನಾಗಲಾಪುರ ಎಂಬ ಗ್ರಾಮವಾಗಿ ಅಲ್ಲಿ ನಾಗಲಾಂಬೆಯ ಮೂರ್ತಿಯು ಸ್ಥಾಪಿಸಲ್ಪಟ್ಟಿದೆ.* ಆ ಗುಡಿಯ ಹತ್ತಿರ ಚೆನ್ನಬಸವನ ಗುಡಿಯೂ ಇದೆ.
ಗುಡಿಯಲ್ಲಿಯ ನಾಗಲಾಂಬೆಯ ಮೂರ್ತಿಯು ಎರಡು ಫೂಟು ಎತ್ತರವದೆ. ಅದಕ್ಕೆ ಇಳಿಬಿಟ್ಟ ತಲೆಗೂದಲು ಭುಜದ ಮೇಲೆ ಪಸರಿಸಿವೆ. ಕೊರಳಲ್ಲಿ ಲಿಂಗ, ರುದ್ರಾಕ್ಷಿ ಮಾಲೆಗಳೂ ಕೈಯಲ್ಲಿ ಜಪಮಾಲೆಯೂ ಇದು ಶಿವಯೋಗಿಣಿಯ ಸಲ್ಲಕ್ಷಣವಿದೆ.]
ಶ್ರಾವಣ ಕಳೆದು ಮಳೆ ಕಡಿಮೆಯಾಯಿತು. ಕೊನೆಯ ಸಲ ಬಿಜ್ಜಳನ ಅಳಿಯ ಚಾವುಂಡನು ದೊಡ್ಡ ಸೇನೆಯನ್ನು ಪಡೆದು ಶರಣರನ್ನು ಸದೆಬಡಿಯಲು ಹೊರಟನು. ಆದರೆ ಕಲಚೂರಿ ಒಡೆತನಕ್ಕೆ ವಿರೋಧಿಗಳಾದ ಮಂಡಲಾಧಿಪತಿಗಳು ಸಾಮಂತರಾಜರು ಶರಣರಿಗೆ ಸಹಾಯ ಮಾಡಿ ಚಾವುಂಡರಾಯನ ಸೈನ್ಯವನ್ನು ನಾಶಮಾಡಲು ಆತುರರಾಗಿ ಕುಳಿತಿದ್ದರು. ಕಾತರವಳ್ಳಿ (ಕಾದರವಳ್ಳಿ) ಯಲ್ಲಿ ಕಡುತರವಾದ ಕಾಳಗವೆಸಗಿತು. (ಕ್ರಿ. ವ. ೧೧೬೮)
ಈ ಕಾಳಗದಲ್ಲಿ ಮಾಚಯ್ಯ ಕಿನ್ನರಿ ಬೊಮ್ಮಯ್ಯರು ತಮ್ಮ ಯುದ್ಧ ಚಾತುರ್ಯವನ್ನು ತುಂಬಾ ಉಪಯೋಗಿಸಿದರು. ಸಹಾಯಕ ಸೇನಾನಾಯಕರೂ ಕಲಿತನದಿಂದ ಕಾದಿದರು. ನಾಗಮ್ಮ, ಎಲ್ಲಿ ಶಕ್ತಿಗುಂದಿದೆ ? ಎಲ್ಲಿ ಶಸ್ತ್ರ ಬೇಕು ? ಎಲ್ಲಿ ಹಸಿವೆ ? ಎಲ್ಲಿ ನೀರು ಬೇಕು? ಎನ್ನುತ್ತ ಅವೆಲ್ಲವನ್ನು ಒದಗಿಸುತ್ತ ಗಾಯಗೊಂಡವರನ್ನು ಹಿಂದೆ ಸಾಗಿಸುತ್ತ ಮಿಂಚಿನಂತೆ ರಣದಲ್ಲಿ ಸಂಚರಿಸುತ್ತಿದ್ದಳು. ಕಾವಿಯ ಸೀರೆಯ ವೀರಕಾಳೆ-ಖಡ್ಗಗಳನ್ನೂ ಭಸ್ಮ-ರುದ್ರಾಕ್ಷಿಗಳನ್ನೂ ಏಕಕಾಲದಲ್ಲಿ ಧರಿಸಿದ, ಇಳಿಬಿಟ್ಟ ಬಿಳಿಯ ತಲೆಗೂದಲಿನ ಎತ್ತರ ನಿಲುವಿನ ಜಾಪುಗಾಲಿನ ಅರವತ್ತು ವಯದ ನಾಗಮ್ಮನವರನ್ನು, ಆ ಯುದ್ಧದಲ್ಲಿ ಬದುಕಿ ಉಳಿದವರು ತಮ್ಮ ಜೀವಮಾನದಲ್ಲೆಲ್ಲ ಎಳೆಯರಿಗೆ ವರ್ಣಿಸಿ ಹೇಳುತ್ತಿದ್ದರು. ಗಂಗಮ್ಮನು ಹಿಂದಿನ ಕಾಳಗದ ಅನುಭವದ ಹಿನ್ನೆಲೆಯಲ್ಲಿ ಹೊಣೆಹೊತ್ತು ನಿಂತಿದ್ದಳು.
ಮೂರು ಮಗ್ಗಲಿನ ಹೊಡೆತ ತಾಳದೆ ಕಲಚೂರ್ಯ ಸೇನೆ ಕಂಗೆಟ್ಟಿತು. ಹಿಂದಕ್ಕೆ ಹೋಗುವ ದಾರಿಗಳೂ ಕಟ್ಟಲ್ಪಟ್ಟಿದ್ದವು. ನಾಶವೊಂದೇ ಹಾದಿ. ಚಾವುಂಡರಾಯನು ಸೋತು ಮಡಿದನು. ಕರ್ಹಾಡದ ತರುಣ ವೀರ ರವಿದೇವನ ಖಡ್ಗ ಪ್ರಹಾರಕ್ಕೆ ಬಲಿಯಾಗಿದ್ದನು. ಅಳಿದುಳಿದವರು ಶಸ್ತ್ರವಿಟ್ಟು ಜೀವದಾನ ಪಡೆದರು. ಹಲವರು ಅತ್ತಿತ್ತ ನುಸುಳಿ ಓಡಿಯೂ ಹೋದರು.
ಶರಣದಳಗಳು ಸಮರಾಂಗಣದಿಂದ ಚೆನ್ನಬಸವೇಶ್ವರನನ್ನು ಪಲ್ಲಕ್ಕಿಯನ್ನೇರಿಸಿಕೊಂಡು ಬಂದು ತಮ್ಮ ಪಾಳಯಗಳಲ್ಲೆಲ್ಲ ಮೆರವಣಿಗೆ ಮಾಡಿದರು. (ಈ ವಿಜಯೋತ್ಸವದ ಕುರುಹಾಗಿರುವ ಶಿಲೆಯು ಈಗ ಹುಣಸೀಕಟ್ಟೆಯ ಶಾಲೆಯಲ್ಲಿದೆ.) ನಾಗಮ್ಮನಿಗೆ ಆಗಂತುಕವಾಗಿ ಆಗಮಿಸಿದ ವೀರಾವೇಶವು ಇಲ್ಲಿಗೆ ಶಮನಗೊಂಡಿತ್ತು.
ಆಮೇಲೆ ಸೋವಿದೇವನು ಶರಣರ ಗೋಜಿಗೆ ಬರುವದನ್ನು ಬಿಟ್ಟುಬಿಟ್ಟನು. ಅದರೊಡನೆ ರಾಜ್ಯದ ಈ ಭಾಗದ ಆಸೆಯನ್ನೂ ಬಿಟ್ಟನು. ಅಷ್ಟರಲ್ಲಿ ಅವನ ತಂದೆಯ ಕೊಲೆಯ ನಿಜವಾದ ಕಾರಣದ ಸುಳಿವೂ ಅವನಿಗೆ ಹತ್ತಿದ್ದಿತು.
ಬೆಳಕು ಅಡಗಿತು
ಉಳಿವೆಯ ವಸಾಹತಿನ, ಅಲ್ಲಿಯ ಮಹಾಮನೆ ಅನುಭವ ಮಂಟಪಗಳ ಕಾರ್ಯಕಲಾಪಗಳ ಉತ್ಸಾಹ ಬಹುದಿವಸ ಉಳಿಯಲಿಲ್ಲ. ಕಲ್ಯಾಣದಲ್ಲಿ ಒಡೆದ ಪ್ರಣತಿಯನ್ನು ಉಳಿವೆಯಲ್ಲಿ ತಂದು ಹೊಂದಿಸಿ ಮತ್ತೆ ಹೊತ್ತಿಸಿದರೂ ಬೆಸುಗೆ ಬಹುದಿವಸ ಬಾಳಲಿಲ್ಲ. ಆದರೆ ಅದು ಆರುವ ಮೊದಲು ಅದರಿಂದ ಹಲವು ದೀಪಗಳು ಹತ್ತಿಕೊಂಡವು. ಚೆನ್ನಬಸವಣ್ಣನ ಅಸಂಖ್ಯಾತ ವಚನಗಳ ಪ್ರತಿಗಳು ನಾಡಿನಲ್ಲಿ ಹೋಗಿದ್ದವು. ಕರಣಹಸಿಗೆ, ಮಂತ್ರಗೋಪ್ಯ, ಪದ ಮಂತ್ರ ಗೋಪ್ಯ, ಸಕೀಲಗಳು ಮುಂತಾದ ಗ್ರಂಥಗಳ ಪ್ರತಿಗಳು ಸಿದ್ಧವಾಗಿದ್ದವು. ನಾಗಮ್ಮನ ಅನುಭವ ಪೂರ್ಣ ವಾಣಿಯಿಂದ ಸಂಗ್ರಹಿಸಿ ಆತನು ರಚಿಸಿದ ಮಿಶ್ರಾರ್ಪಣ ಗ್ರಂಥವು ಮುಗಿಯುತ್ತ ಬಂದಿತ್ತು. ಮಲೆನಾಡ ಹವೆಗೆ ಚೆನ್ನಬಸವಣ್ಣನ ಆರೋಗ್ಯ ಕೆಟ್ಟಿತ್ತು. ಕಿನ್ನರಯ್ಯ ಬಯಲಾದ ಮೇಲೆ ವಸಹಾತಿನ ಬೆನ್ನುಮೂಳೆ ಮುರಿದಂತಾಗಿತ್ತು. ಘೋರಾರಣ್ಯದ ಮಧ್ಯದಲ್ಲಿ ವರ್ಷದಲ್ಲಿ ನಾಲ್ಕುತಿಂಗಳು ರಭಸದಿಂದ ಸುರಿಯುವ ಮಳೆಯಲ್ಲಿ ಇರಲಾಗದೆ ಹಲವರು ಚದರಿ ಹೋಗುವ ಇಚ್ಛೆ ತಾಳಿದ್ದರು. ಇನ್ನು ತನ್ನ ಮಣಿಹ ಮುಗಿದಂತೆಯೇ ಎಂದು ಭಾವಿಸಿದ ಚೆನ್ನಬಸವಣ್ಣನು ಹೆಚ್ಚು ಹೆಚ್ಚಾಗಿ ಅಂತರ್ಮುಖಿಯಾದನು. ಒಂದು ದಿನ ತಮ್ಮ ನಿರಂಜನ ಪೀಠದ ಅಧಿಕಾರವನ್ನು ನಿರ್ವಹಿಸುವಂತೆ ಸಿದ್ಧರಾಮ ಶಿವಯೋಗಿಗಳಿಗೆ ನಿರೂಪಣ ಪತ್ರವನ್ನು ಬರೆದು ಅದನ್ನೂ ಟೊಪ್ಪಿ ಕಮಂಡಲು, ಯೋಗದಂಡಗಳನ್ನೂ ಕರಣಹಸಿಗೆ ಮುಂತಾದ ಗ್ರಂಥಗಳ ಪ್ರತಿಗಳನ್ನೂ ರೇಚಣ್ಣನ ಅಂಕಿತದಲ್ಲಿ ಸಮರ್ಥನಿಷ್ಠರಾದ ಜಂಗಮ ಮೂರ್ತಿಗಳೊಡನೆ ಸೊನ್ನಲಾಪುರಕ್ಕೆ ಕಳುಹಿದನು. ಇಲ್ಲಿಗೆ ಚೆನ್ನಬಸವಣ್ಣನವರ ಜೀವನದ ಧ್ಯೇಯವು ಪೂರೈಸಿದಂತಾಗಿ ಅವರು ಯೋಗನಿರತರಾದರು.
ಕಿನ್ನರಿಬೊಮ್ಮಯ್ಯ ಬಯಲಾದ ಸುದ್ದಿಯನ್ನು ಒಂದೆರಡು ತಿಂಗಳಾದಮೇಲೆ ಸಂಚಾರದಲ್ಲಿದ್ದ ರುದ್ರಮುನಿಗಳು ಕೇಳಿ ಉಳಿವೆಗೆ ಬಂದರು. ಪರಿಸ್ಥಿತಿಯನ್ನು ವಿಶ್ಲೇಷಿಸಿ ನೋಡಿ, ಚೆನ್ನಬಸವಣ್ಣನವರ ಅವತಾರ ಸಮಾಪ್ತಿ ದೂರವಿಲ್ಲೆಂದು ತಿಳಿದರು. ಧ್ಯಾನಯೋಗದ ಹೊರತು ಚೆನ್ನಬಸವಣ್ಣನವರ ಎಲ್ಲ ಇಂದ್ರಿಯಗಳ ಕ್ರಿಯೆಗಳು ನಿಂತುಹೋಗಿದ್ದವು. ಆತ್ಮಜ್ಯೋತಿಯು ಪರಂಜ್ಯೋತಿಯಲ್ಲಿ ಬೆರೆವ ಭರವು ಅವರ ಮುಖದಲ್ಲಿ ತೇಜಃಪುಂಜವಾಗಿ ಸ್ಪುರಿಸುತ್ತಿತ್ತು. ಮಹದಬೆಳಗೇ ದರ್ಶನಕೊಟ್ಟಂತಾಗಿ ರುದ್ರಮುನಿಗಳು ಪರವಶತೆಯಿಂದ ಮೈಯಿಕ್ಕಿ ವಂದಿಸಿದರು. ನಾಗಮ್ಮ ಸಾಷ್ಟಾಂಗವಾಗಿ ಎರಗಿದಳು. ಶರಣರು ಓಲೈಸಿದರು, ಭಕ್ತರು ಭಜಿಸಿದರು. ಆಗ ನಾಗಮ್ಮನ ಹೃದಯದಲ್ಲಿ ದುಗುಡವೊಂದು ತಲೆದೋರಿತು. ಚೆನ್ನಬಸವಣ್ಣ ತನ್ನ ಮಗನೆಂಬ ಮಾಯಾ ಮೋಹದ ವ್ಯಥೆಯೇನೂ ಅದಲ್ಲ. ಅದು ಕೊಂಚವೂ ಇರಲಿಲ್ಲ. ಆತನು ಗುರು, ತಂದೆ ಎಂದೇ ಭಾವಿಸಿದ್ದಳು. ಷಟ್ಸ್ಥಲಚಕ್ರವರ್ತಿ ಶಿವಯೋಗಿ ಎಂದು ಪೂಜ್ಯನನ್ನಾಗಿ ಕಾಣುತ್ತಿದ್ದಳು. ಬಸವ, ಚೆನ್ನಬಸವ, ಅಲ್ಲಮಪ್ರಭು ಇವರಿಗೆ ಹಾಗೆಯೇ ಇನ್ನುಳಿದ ಶಿವಶರಣರಿಗೆ ತಾನು ಕರುಣೆಯ ಕೂಸು ಎಂದೇ ಎಂದೆಂದಿಗೂ ಭಾವಿಸಿದ್ದಳು.
'ಸಂಗನಬಸವಣ್ಣನ ಪ್ರಸಾದದಿಂದ ಎನ್ನ ಭವದ ಬಳ್ಳಿಯ ಬೇರು ಹರಿಯಿತ್ತು.'
'ಚೆನ್ನಬಸವಣ್ಣನು ಕರುಣಿಸಿದ್ದರಿಂದ ಎನ್ನ ಮನದ ಕಪಟ ಹಿಂಗಿತ್ತು.'
'ಪ್ರಭುದೇವರ ಶ್ರೀಚರಣದ ಸೇವೆಯಿಂದ ಎನ್ನ ಅಂತರಂಗದ ಸಂದು ಸಂಶಯ ತೊಲಗಿತ್ತು' ಎಂದು ಯಾವಾಗಲೂ ಹಾಡುತ್ತಿದ್ದಳು.
ಹಾಗಾದರೆ ಈಗಾದ ದುಗುಡದ ಕಾರಣವೇನು ? ಬಸವಣ್ಣ ಸಂಸ್ಥಾಪಿಸಿದ ಶರಣಧರ್ಮ ಸರ್ವರೂ ಸಮಾನತೆಯಿಂದ ಆತ್ಮೋದ್ಧಾರ ಸಾಧಿಸುವ ಧರ್ಮ- ನಾಡಿನಲ್ಲಿ ಸುಸ್ಥಿರವಾಗಿ ನೆಲೆಗೊಳ್ಳುವದು ತನ್ನ ಜೀವನದ ಗುರಿ. ಅದಾಗದ ಮೊದಲೇ ಚೆನ್ನಬಸವಣ್ಣ ತೊಲಗುವನೆಂಬುದು ಕಾರಣವಾಗಿತ್ತು. ಆಧಾರ ತಪ್ಪಿದ ಬಳ್ಳಿಯಂತೆ, ತಾಯನಗಲಿದ ಕರುವಿನಂತೆ ಆಗಿತ್ತು ಆಕೆಯ ಅಂತರಂಗದ ಸ್ಥಿತಿ. ಚೆನ್ನಬಸವಣ್ಣನವರ ಮುಖದ ಆ ಬೆಳಗು ಮಾಬೆಳಗ ಕೂಡಿದಾಗ ಶರಣರು 'ಶಿವಶಿವಾ' ಎಂದು ಉಸಿರುಗರೆದರು. ಭಕ್ತರೆಲ್ಲ ಗೋಗರೆದರು. ಗಿಡಮರಗಳೆಲ್ಲ ಸ್ವಚ್ಛವಾಗಿ ಧ್ಯಾನದಲ್ಲಿ ಮುಳುಗಿದಂತಿದ್ದವು. ನಾಗಮ್ಮ,
"ನಾನದವೆ, ಅಯ್ಯಯ್ಯಾ ಕೈಯ ಕೂಲ ಕೊಂಬರೇ ?
ಅಯ್ಯಾ ಎಳೆಗರುವಿನ ಎಳಗಂದಿಯನೆಳೆದೊಯ್ದರೇ ? ಭಕ್ತರು
ಅಯ್ಯೋ ಅಯ್ಯೋ ಎನಲೊಯ್ದರೇ
ಬಸವಣ್ಣ ಪ್ರಿಯಚೆನ್ನಸಂಗಯ್ಯಾ ?”
ಎಂದು ಬಾಯ್ದಿಟ್ಟು ಪ್ರಲಾಪಿಸಿದಳು.
ರುದ್ರಮುನಿಗಳ ನೇತೃತ್ವದಲ್ಲಿ ಚೆನ್ನಬಸವಣ್ಣನವರ ಪಾರ್ಥಿವ ಶರೀರಕ್ಕೆ ಸುವಿಧಾನಪೂರ್ವಕವಾಗಿ ಸಮಾಧಿಯಾಯಿತು. (ಕ್ರಿ. ವ. ೧೧೭೦). ಅಲ್ಲಿ ಅವರ ದೇವಸ್ಥಾನ ಉಂಟಾಗಿ ಪ್ರತಿವರ್ಷ ಮಹೋತ್ಸವ ನಡೆಯುತ್ತಿದೆ.
ಮುಂದೆ ಮೂರು ದಿವಸಕ್ಕೆ ಸೊನ್ನಲಾಪುರದಿಂದ ಮರಳಿದ ರೇಚಣ್ಣ ಮೊದಲಾದವರು ತಮ್ಮ ಮಹಾಶಿವಯೋಗಿಯನ್ನು ಕಾಣದೆ ಮರುಗಿದರು. ಈ ಮೂರು ದಿವಸ ನಾಗಮ್ಮ ಬಹುತರವಾಗಿ ಮೌನವಾಗಿಯೇ ಇದ್ದಳು. ಆಶ್ರಮದಲ್ಲೆಲ್ಲ ಔದಾಸೀನ್ಯವೇ ಆವರಿಸಿತ್ತು. ನಾಗಮ್ಮನಿಗೆ ಲೌಕಿಕದ ಯಾವ ಸೂತ್ರ ತಂತ್ರಗಳೂ ಉಳಿಯಲಿಲ್ಲ. ಸರ್ವಸ್ವತಂತ್ರಳು. ಜೀವನ ಹೇಗೆಂಬ ವಿಚಾರವಂತೂ ಮೊದಲೇ ಇಲ್ಲ. ಶರಣಧರ್ಮದ ಮೇಲಿನ ಶ್ರದ್ಧೆ ನಿಷ್ಠೆ ಇತ್ಯಾದಿ ಭಕ್ತಿಪಾರಮ್ಯದಲ್ಲಿ ತಲ್ಲೀನಳಾಗಿದ್ದಳು. ಅದರ ಹೊರತು ಬಾಳುವ ಇಲ್ಲವೆ ಬಯಲಾಗುವ ಭಾವವೇ ಇಲ್ಲ. ಧೇಯವೆಂದರೆ ಒಂದೇ, ಧರ್ಮೋದ್ಧಾರ. ಸ್ಮರಣವೆಂದರೆ ಪ್ರಭುದೇವ, ಬಸವಣ್ಣ, ಚೆನ್ನಬಸವಣ್ಣ ಇವರ ಅತ್ಯಂತಿಕ ಅಮೃತವಾಣಿ. ಇದ್ದಷ್ಟು ದಿವಸ ಅದನ್ನೇ ಮಾಡುವದು. ಅದಕ್ಕಾಗಿಯೇ ಶ್ರಮಿಸುವವರ ಸಹವಾಸ. ಅದರ ವಿಚಾರವನ್ನೇ ಹೇಳುವದು, ಕೇಳುವದು. ಧೇಯದಲ್ಲಿಯೇ ಮನಸ್ಸು ಪೂರ್ಣವಾಗಿ ಎರಕಗೊಂಡಿತ್ತು. ಈ ಧೇಯಾಸಕ್ತಿಗಾಗಿಯೇ ಇನ್ನು ಬಾಳುವದು. ಈ ನಿರ್ಧಾರದಿಂದ ಮತ್ತೆ ಮೈದೋರಿತು ಉತ್ಸಾಹ ಅವಳಲ್ಲಿ.
ಆದರೆ ಅನುಭವಮಂಟಪ ಸಂಸ್ಥೆ ಮತ್ತೆ ಒಡೆಯಿತು. ಅನುಭಾವಿಗಳು ಅಲ್ಲಿ ನಿಲ್ಲದಾದರು. ಅವರು ಗ್ರಂಥಭಾಂಡಾರವನ್ನು ಹಂಚಿಕೊಂಡು ತಮ್ಮಿಷ್ಟ ಬಂದಕಡೆಗೆ ಸಾಗಿಹೋದರು. ನಾಡಿನ ಬೇರೆಬೇರೆ ಭಾಗಗಳಲ್ಲಿ ತಮ್ಮ ಮಠಗಳನ್ನು ಸ್ಥಾಪಿಸಿ ಲಿಂಗವಂತ ಧರ್ಮಪ್ರಸಾರವನ್ನು ಕೈಕೊಂಡರು. ಕೊನೆಗೆ ಉಳಿದ ಪ್ರಮುಖರೆಂದರೆ ರುದ್ರಮುನಿದೇವರು, ನಾಗಮ್ಮ, ನುಲಿಯಚಂದಯ್ಯ, ರುದ್ರಮುನಿದೇವರು ದೇಶದಲ್ಲಿ ಅಲ್ಲಲ್ಲಿ ಸ್ಥಾಪಿಸಿದ ತಮ್ಮ ಮಠಗಳನ್ನು ನಿರೀಕ್ಷಿಸುತ್ತ ಶ್ರೀಶೈಲದ ಕಡೆಗೆ ಹೋದರು.
ಮಹಾಸಾಧನೆಯ ಪ್ರತೀಕ
ಏಳು ವರ್ಷಗಳ ಬಳಿಕ ಒಂದು ಮುಂಜಾವು. ಯೋಗಮಂಟಪದ ಎದುರಿಗೆ ಅಂಗಳದಾಚೆಯ ಗಿಡದ ಕೆಳಗಿನ ಜಗುಲಿಯ ಮೇಲೆ ಕೆಲವು ಯಾತ್ರಿಕರು ಅಮ್ಮನವರ ದರ್ಶನಕ್ಕೆ ಕಾದು ಕುಳಿತಿದ್ದರು. ಶಿವಯೋಗಿಣಿಯ ಮುಂಜಾನೆಯ ಲಿಂಗಾರ್ಚನೆಗೆ ಸೇವೆ ಸಲ್ಲಿಸಿ, ಶರಣೆ ಗೌರಮ್ಮ ಪಾತ್ರೆ-ತಟ್ಟೆ-ಬಟ್ಟೆಗಳನ್ನು ಹಿಡಿದುಕೊಂಡು ಹೊರಗೆ ಬಂದಳು. ಯಾತ್ರಿಕರು ಗಡಬಡಿಸಿ ಮೇಲೆದ್ದರು. ಭಸ್ಮರುದ್ರಾಕ್ಷಿಭೂಷಿತೆಯಾಗಿದ್ದರೂ ಆ ತಾಯಿ ನಡುವಯದವಳಾದ್ದರಿಂದ ಹೌದೋ ಅಲ್ಲವೋ ಎಂದು ಕಕ್ಕಾವಿಕ್ಕಿಯಾಗಿದ್ದರು. ಅದನ್ನು ತಿಳಿದು ಗೌರಮ್ಮ 'ಅಮ್ಮನವರು ಈಗ ಬರುತ್ತಾರೆ. ಕುಳಿತುಕೊಳ್ಳಿರಿ ಅಪ್ಪಗಳೇ' ಎಂದು ಹೇಳಿದಳು. ಯಾತ್ರಿಕರು ಸಮಾಧಾನದಿಂದ ಕುಳಿತರು. ಕೆಲವು ನಿಮಿಷಗಳ ಮೇಲೆ ಭಸ್ಮತ್ರಿಪುಂಡ್ರದಿಂದ ವಿರಾಜಿಸುವ ವಿಶಾಲ ಹಣೆಯ, ಕುಳಿಬಿದ್ದ ಕೆನ್ನೆಗಳ, ಗೂಡುಸೇರಿದ ಕಣ್ಣುಗಳ, ಉದ್ದ ಮೂಗಿನ, ಹೊಳೆಯುವ ಮುಖ, ಕರಗುವದರಲ್ಲಿದ್ದ ವಿರಳವಾದ ಕಿರಿದಾಗಿ ಇಳಿಬಿದ್ದ ಬಿಳಿಯ ಜಡೆ, ಉದ್ದುದ್ದ ಬೆರಳುಗಳ ಕೈ ಕಾಲು, ಕೊರಳು ತೋಳು ಮುಂಗೈಗಳಲ್ಲಿ ರುದ್ರಾಕ್ಷಿಮಾಲೆ, ಕಾವಿಯ سೀರೆ, ಬಡಕಲು ಶರೀರದ ಮೇಲೆತ್ತರಾಳು, ಅಷ್ಟೇ ಉದ್ದಾದ ಕೋಲು ಎಡಗೈಗೆ, ಜಪಮಾಲೆ ಬಲಗೈಗೆ ಹೀಗೆ ಇರುವ ಮುದುಕಿ ನಾಗಮ್ಮ ಶಿವಯೋಗಿಣಿ ದಪ್ಪವಾದ ಹಾವುಗೆ ಎತ್ತಿ ಎತ್ತಿ ಹೆಜ್ಜೆ ಹಾಕುತ್ತ ಯೋಗಮಂದಿರದ ಒಳಗಡೆಯಿಂದ ಹೊರಗೆ ಬಂದಳು. ಯಾತ್ರಿಕರು ಅಂಗಳದಲ್ಲಿ ಸಾಲಾಗಿ ಸಾಷ್ಟಾಂಗವಾಗಿ ಎರಗಿದರು.
"ಶಿವನಿಗೆ ಶಿವನಿಗೆ ಶಿವಶರಣು. ಏಳಿ ಅಪ್ಪಗಳಿರಾ ಏಳಿರಿ. ಯಾವೂರೇಪಾ ? ಎಲ್ಲಿಂದ ಬಂದುದು ?” ಎಂದು ಕೈಯೆತ್ತಿ ಹರಸುತ್ತ ಕೇಳಿದಳು.
ಹಿರಿಯನೊಬ್ಬ ಹೇಳಿದ :
"ನಮ್ಮದು ಮಗಳೂರು ಅಮ್ಮಾ! ಪಂಪಾಪತಿಯ ದರ್ಶನಕ್ಕೆ ಹೊರಟಿದ್ದೇವೆ. ಈ ಪಾದದರ್ಶನ ಪಡೆದು ಹೋಗಲೆಂದು ಇತ್ತ ಬಂದೆವು.”
"ಒಳಿತಾಯಿತು ಅಪ್ಪಾ, ಪಂಪಾಪತಿಯ ಹಂಬಲ ಮನದಲ್ಲಿ, ಹಂಪಿಯ ಮಾರ್ಗಕ್ರಮಣದ ಬಲ ಮೈಯಲ್ಲಿ ! ನೀವು ಬಂದುದು ವಿರೂಪಾಕ್ಷನೇ ಬಂದಂತೆ. ನನ್ನ ಪುಣ್ಯ! ಇಲ್ಲಿ ಇರಿ ಎರಡು ದಿನ. ಗೌರಕ್ಕ, ಶಂಕರಣ್ಣನನ್ನು ಕರೆ. ಇವರ ಸಾಮಾನು ಇಡಿಸಿ ಸ್ನಾನ ಮಾಡಿಸಿಕೊಂಡು ಬರಲಿ.”
ಹೀಗೆ ಹೇಳುತ್ತ ಅಮ್ಮ ದಾಸೋಹ ಮಠದ ಕಡೆಗೆ ನಡೆದಳು. ಶಂಕರಣ್ಣ ಬಂದು ಯಾತ್ರಿಕರನ್ನು ಕರೆದುಕೊಂಡು ಹೋದನು. ಶಿವಯೋಗಿಣಿ ಮಠದ ಬಾಗಿಲ ಮುಂದಿನ ಮೆಟ್ಟಿಲುಗಳನ್ನು ಗೌರಮ್ಮನ ಆಸರೆ ಹಿಡಿದು ಹತ್ತಿ ಹೋಗಿ ಕಟ್ಟಿಯಮೇಲೆ ಕುಳಿತಳು. ನಿತ್ಯದಂತೆ ಅಲ್ಲಿಯ ಕ್ರಿಯೆಗಳನ್ನು ನಿರೀಕ್ಷಿಸ ಹತ್ತಿದಳು.
ಮುಂದೊಂದುದಿನ ಮುಂಜಾನೆ ಚಂದಯ್ಯ ಆಶ್ರಮದಿಂದ ಸ್ವಲ್ಪ ದೂರ ನದೀ ತೀರದಲ್ಲಿ ತನ್ನ ಕಾಯಕದ ಹುಲ್ಲುಕೊಯ್ಯುತ್ತಿದ್ದನು. ದಿನ್ನೆಯಮೇಲಿನ ದಾರಿಯಲ್ಲಿ ಇಬ್ಬರು ಸ್ವಾಮಿಗಳು ಬರುವದು ಕಾಣಿಸಿತು. ಆದರೂ ಕಾಯಕದಲ್ಲಿ ಕಡುನಿಷ್ಠ ಚಂದಯ್ಯ ಯಾರುಯಾರೋ ಬರುತ್ತಾರೆ, ಹೋಗುತ್ತಾರೆ ಎನ್ನುತ್ತ ತಲೆತಗ್ಗಿಸಿ ಕ್ರಿಯಾನಿರತನಾಗಿದ್ದನು. ಅವರು ದಿನ್ನೆ ಇಳಿದು ಗಿಡಮರಗಳ ನಡುವಿನ ತಿರುವುಮರುವಿನ ದಾರಿಗುಂಟ ನದಿಯ ಒಡಲಿಗೆ ಬರುವಾಗ ಅವರ ಮಾತುಗಳು ಚಂದಯ್ಯನಿಗೆ ಕೇಳಹತ್ತಿದವು. ಒಂದು ದನಿ ಪರಿಚಿತ; ಇನ್ನೊಂದು ಹಿಂದೆ ಕೇಳಿದಂತಿದೆ, ಅದೂ ಗೊತ್ತಾಯಿತು; ಒಬ್ಬರು ಸಿದ್ಧವೀರಸ್ವಾಮಿ, ಇನ್ನೊಬ್ಬರು ರುದ್ರಮುನಿದೇವರು. ಬಹುದಿವಸಕ್ಕೆ ಬಂದರು. ಮಾತು ತನ್ನ ಅಮ್ಮನವರ ವಿಷಯವಾಗಿತ್ತು. ಎದೆತುಂಬಿ ಬಂದಿತು. ಅವರಿನ್ನೂ ಸ್ವಲ್ಪ ದೂರ ಇದ್ದಾರೆ. ಅತ್ತ ಕಿವಿಗೊಟ್ಟ, ಇತ್ತ ಕೈ ಅವಸರವಾಗಿಸಿದ.
ತಮಗಿಷ್ಟವೆನಿಸಿದ ರೀತಿಯಲ್ಲಿ ವೀರಶೈವೋದ್ಧರಣ ಕಾರ್ಯ ನೆರವೇರಿಸುವದಕ್ಕೆ ಸಂಚರಿಸುತ್ತಿದ್ದ ರುದ್ರಮುನಿದೇವರು ನಾಗಮ್ಮನವರ ದರ್ಶನಾಕಾಂಕ್ಷಿಗಳಾಗಿ ನಿನ್ನೆ ಮಹೇಶ್ವರ ಹಳ್ಳಿಗೆ ಬಂದಿದ್ದರು. ಬೆಳಗಿನ ಲಿಂಗಾರ್ಚನೆ ನೆರವೇರಿಸಿಕೊಂಡು ಇಬ್ಬರೂ ಸ್ವಾಮಿಗಳು ಪಾದಚಾರಿಗಳಾಗಿ ಅಮ್ಮನ ಆಶ್ರಮಕ್ಕೆ ಹೊರಟಿದ್ದರು. ಅವರ ಮಾತು ಅಮ್ಮನವರ ವಿಷಯಕ್ಕೆ ಹೊರಳಿದ್ದವು.
ಸಿದ್ಧವೀರದೇವರ ಮಾತು :
"ಇಲ್ಲಿ ಅವರ ಪ್ರಭಾವ ತುಂಬ ಹರಡಿದೆ. ನಿತ್ಯವೂ ಅವರ ದರ್ಶನಕ್ಕೆ ಬರುವ ಹೊಸ ಜನರು ಇದ್ದೇ ಇರುತ್ತಾರೆ. ಅನುಭಾವಿಗಳು ಶಿವಯೋಗ ಸಾಧಕರು ಬರುತ್ತಾರೆ. ಎಲ್ಲರ ಆತ್ಮತೃಷೆಗೂ ತೃಪ್ತಿದಾಯಕ ಅಮ್ಮನ ಮಾತು. ಎಂತಹ ತಪಸ್ವಿನಿ! ಎಂತಹ ಸಾಧಕಳು ! ಈ ಶಿವಯೋಗಿಣಿ ಮಹಾಸಾಧನೆಯ ಒಂದು ಪ್ರತೀಕ.”
"ಹೌದು ಇವರ ವೃತ್ತಿಯೇ ತತ್ವಸಾಧನೆಯಾಗಿತ್ತು. ನಿತ್ಯ ಸತ್ಯತತ್ವಗಳಿಗೆ ತೊತ್ತಾಗಿ, ತತ್ವವೇತ್ತರಿಗೆ ತೊತ್ತಾಗಿ ಜನ್ಮಾರಭ್ಯ ಕೈಕೊಂಡ ಇವರ ಕಾಯಕವೇ ತಪ. ಇದನ್ನೇ ಇವರು ಕ್ರಿಯಾ-ಜ್ಞಾನಗಳ ಸಮನ್ವಯದ ಸಾಧನ ಮಾಡಿಕೊಂಡರು. ಇವರ ಜ್ಞಾನ-ಕ್ರಿಯೆಗಳನ್ನು ವಿಂಗಡಿಸಿ ತಿಳಿಯುವದೇ ಸಾಧ್ಯವಿರಲಿಲ್ಲ. ಆ ಸ್ವರೂಪವೇ ಶಿವಶಕ್ತಿಯರ ಸಾಮರಸ್ಯವನ್ನು ನೀಡಿದೆ. ಪೂಜೆ ಯೋಗಾಭ್ಯಾಸಗಳೂ ಅದರಲ್ಲಿಯೇ ಅಡಕವಾಗಿದ್ದವು.”
"ಅಲ್ಲವೇ? ಅಮ್ಮನ ಚರಿತ್ರೆ ಕೇಳಿದರೆ ಕೌತುಕವಾಗುತ್ತದೆ.”
"ನಿಜ ನಿಜ. ಕೌತುಕದಲ್ಲಿ ಕೌತುಕವಾಗಿದೆ ಈ ಉಜ್ವಲ ಚರಿತ್ರೆ.
ಬಸವಣ್ಣನವರ ಚರಿತ್ರೆಯಲ್ಲಿ ನಾಗಮ್ಮನವರ ಪಾತ್ರ ಅತಿ ಮಹತ್ವದ್ದು. ಬಸವಣ್ಣನವರ ಸರ್ವಸಾಧನೆಗೆ ಸರ್ವಕಾರ್ಯ ತತ್ಪರತೆಗೆ ಇವರು ಹಿನ್ನೆಲೆಯ ಶಕ್ತಿಯಾಗಿದ್ದರು. ಬಸವಣ್ಣನವರ ವ್ಯಕ್ತಿತ್ವವನ್ನು ರೂಪಿಸಿದ ಶ್ರೇಯಸ್ಸಿನಲ್ಲಿ ಬಹುಭಾಗ ಈಕೆಯದು. ಈ ಶರಣೆ ಅನುಭವಮಂಟಪ ಮಹಮನೆಗಳ ಧುರೀಣೆಯಾಗಿದ್ದಳು. ಜಟಿಲ ಸಮಸ್ಯೆಗಳಲ್ಲಿ ಮಾರ್ಗದರ್ಶಿನಿಯಾಗಿದ್ದಳು. ಶರಣ ಸಮುದಾಯದ ಆಪತ್ಕಾಲದಲ್ಲಿ ಧೈರ್ಯದ ಬೆಳಕಾಗಿದ್ದಳು. ರಣರಂಗದಲ್ಲಿ ಪ್ರೋತ್ಸಾಹಕಳಾಗಿದ್ದಳು. ವೃದ್ಧಾಪ್ಯದಲ್ಲಿ ಉಳಿವೆಯ ವಸಹಾತಿನ ಸ್ಥಾಪನೆಯಲ್ಲಿ ಮುಖ್ಯಳೇ ಆಗಿದ್ದಳು. ಇದನ್ನು ನೀವೂ ಬಲ್ಲಿರಿ. ಅಲ್ಲಿ ಎಲ್ಲರೂ ಅಗಲಿದ ಮೇಲೆಯೂ ಧೃತಿಗೇಡದೆ ತನ್ನ ಗುರಿಯಾದ ಧರ್ಮೋನ್ನತಿಯ ಕಾರ್ಯವನ್ನು ಜೀವಾಂಶದವರೆಗೂ ನಡಿಸುವ ನಿಶ್ಚಯ ಮಾಡಿ ಹೊರಟು ಇಲ್ಲಿ ಬಂದಿದ್ದಾಳೆ.”
ಬಂಡೆಯನ್ನೇರಿ ಹಾದಿಯ ಮೇಲೆ ಹುಲ್ಲುಹೊರೆಯನ್ನಿಟ್ಟುಕೊಂಡು ನಿಂತಿದ್ದ ಚಂದಯ್ಯ "ಶರಣು ಶರಣು, ಗುರುಗಳಿಗೆ ಶರಣು ಶರಣು” ಎನ್ನುತ್ತ ಇಬ್ಬರ ಪಾದಕ್ಕೂ ಎರಗಿದನು. ರುದ್ರಮುನಿ ನೋಡಿದರು ಅವನನ್ನು, ಹೊರೆಯನ್ನೂ.
"ಭಲೆ ಕಾಯಕದ ಕೈಲಾಸಪತಿ ಚಂದಯ್ಯನವರು” ಎನ್ನುತ್ತ ತಲೆಹಿಡಿದೆತ್ತಿ ಆಲಿಂಗಿಸಿದರು.
"ಈಶ್ವರನ ಮುಂದಿನ ನಂದಿಯಂತೆ ಅಮ್ಮನವರ ಮುಂದಿನ ಚಂದಯ್ಯನ ದರ್ಶನ ಅಮ್ಮನವರ ದರ್ಶನಕ್ಕೆ ನಾಂದಿ” ಎಂದು ನಲಿದು ನುಡಿದರು ಸಿದ್ಧವೀರದೇವರು.
ಹೊರೆಹೊತ್ತು ಚಂದಯ್ಯ 'ಬನ್ನಿ' ಎಂದು ಮುಂದಾದನು. ತನ್ನ ಕುಟೀರದ ಮುಂದೆ ಹೊರೆ ಇಟ್ಟು ಯೋಗಮಂಟಪದ ಆಸನದಲ್ಲಿ ಗುರುದ್ವಯರನ್ನು ಕೂಡ್ರಿಸಿ ದಾಸೋಹ ಮಠಕ್ಕೆ ಓಡಿದನು.
ಚಂದಯ್ಯನ ಹೆಗಲ ಮೇಲೆ ಕೈಯಿಟ್ಟು ಕೈಯ್ಯ ಕೋಲನ್ನು ಮುಂದೆ ಮುಂದೆ ಚಾಚಿ ಊರುತ್ತ ದೊಡ್ಡದೊಡ್ಡ ಹೆಜ್ಜೆ ಹಾಕುತ್ತ ಅವಸರದಿಂದ ಅಮ್ಮ ಬಂದಳು. ಪಾದರಸವು ಪಾದರಸದಿಂದ ಆಕರ್ಷಿಸಲ್ಪಟ್ಟಂತಾಗಿತ್ತು. ತೇಗುತ್ತ ಬಾಗಿಲಿಗೆ ಬರಲು ಸ್ವಾಮಿಗಳು ಎದ್ದು ನಿಂತರು. ಆಕೆ ಕೋಲು ಚೆಲ್ಲಿ "ಶರಣು, ಶರಣು, ಶಿವಶರಣು' ಎನ್ನುತ್ತ ಅವರ ಪಾದಕ್ಕೆ ತಲೆಹಚ್ಚಿ ನಮಿಸಲು ಬಾಗುತ್ತಿರುವಾಗ ಅವರು ತಡೆದು ಎಡಬಲದಲ್ಲಿ ತೋಳು ಹಿಡಿದು ಪೀಠದ ಮೇಲೆ ಕೂಡ್ರಿಸಹೋದರು. ಆದರೆ ಅಮ್ಮ ಕುಸಿದು ಕೆಳಗೆ ಕುಳಿತಳು.
ಆನಂದಾಶಯದ ಮಾತು ನಡೆದು ಮುಂದೆ ರುದ್ರಮುನಿಗಳು ತಮ್ಮ ಕೈಕೊಂಡ ಸಂಚಾರದ ವಿವರಗಳನ್ನು ತಿಳಿಸಿದರು. ಶರಣಧರ್ಮ ಪ್ರಚಾರ ನಡೆದ ವಿಷಯದಲ್ಲಿ ಹೀಗೆ ಹೇಳಿದರು :
"ಮೊದಲು ಕಲ್ಯಾಣದಿಂದ ಬಳಿಕ ಕುರಗೋಡಿನಿಂದ, ಉಳಿವೆಯಿಂದ ಹರಡಿಹೋದ ಶರಣರು ಜಂಗಮಮೂರ್ತಿಗಳು ನಾಡಿನ ಮೂಲೆಮೂಲೆಗೂ ಬಸವಸಂದೇಶವನ್ನು ತಲುಪಿಸುತ್ತಿದ್ದಾರೆ. ಪ್ರಮಥರ ಮಹಿಮೆಯನ್ನು ಹಾಡು ಕಟ್ಟಿ ಹಾಡುತ್ತಿದ್ದಾರೆ. ವಚನಗಳ ಪ್ರತಿಮಾಡಿ ಕಳಿಸುತ್ತಿದ್ದಾರೆ. ಪಂಡಿತರು ಮತ್ತೆ ಬರೆಯುತ್ತಲೂ ಇದ್ದಾರೆ. ವೀರಶೈವ ಮತಾನುಯಾಯಿಗಳು ಸಾಕಷ್ಟು ಇರುವ ಪ್ರತಿಯೊಂದು ಹಳ್ಳಿಗೂ ಒಂದು ಮಠವಾಗಿದೆ. ಕ್ರಿಯಾ ಮೂರ್ತಿಯಾಗಿ ಒಬ್ಬ ಸ್ವಾಮಿ ಅಲ್ಲಿ ನಿಂತಿದ್ದಾರೆ. ಭಕ್ತರ ಧಾರ್ಮಿಕ ಕಾರ್ಯಕರ್ತರುಗಳಾಗಿ ಮಠಪತಿ, ಗಣಾಚಾರಿ, ಸಾರುವಯ್ಯ ಮುಂತಾದವರ ಯೋಜನೆಯಾಗಿದೆ. ಮಹತ್ವದ ಸ್ಥಳಗಳಲ್ಲಿ ದಾಸೋಹದ ಮಠಗಳಾಗಿವೆ. ಭಕ್ತರು ಕಾಯಕ ಭಾವನೆಯಿಂದ ಕೃಷಿಕೈಗಾರಿಕೆಗಳಲ್ಲಿ ಉತ್ಸಾಹಿತರಾಗಿ ಮುಂದುವರಿಯುತ್ತಿದ್ದಾರೆ. ಅಮ್ಮನವರೆ, ಪ್ರಮಥರಿಂದ ಪರಿಪೂರ್ಣತೆಗೊಂಡ ವೀರಶೈವ ಧರ್ಮ ಈಗ ವ್ಯಕ್ತಿಯದಲ್ಲ, ಕುಟುಂಬ ಮಾತ್ರದ್ದಲ್ಲ, ಸಾಮಾಜಿಕ ಧರ್ಮವಾಗಿ ಬೇರೂರುತ್ತಲಿದೆ. ಬಸವಣ್ಣನವರನ್ನು ಸಲಹಿದ ನಿಮ್ಮ ಹಸ್ತಗುಣ! ಚೆನ್ನಬಸವಣ್ಣನವರನ್ನು ಹೆತ್ತ ನಿಮ್ಮ ಉದರ ಮಹಿಮೆ! ಅಮ್ಮಾ ನಿಮ್ಮ ಜೀವನ ಸಾರ್ಥಕ......” ಎನ್ನುತ್ತ ಎದೆದುಂಬಿ ಕೈ ಮುಗಿದರು.
"ಶಿವನ ಹಸ್ತ, ಶಿವನ ವಾಣಿ, ಬಸವಣ್ಣ ಪ್ರಿಯ ಚೆನ್ನಸಂಗಯ್ಯ ನೀವಾಗಿ ಮಾಡಿದ್ದಲ್ಲದೆ ಬೇರೆ ಆದುದುಂಟೇ ಗುರುವೇ ?” ಮುಖವೆತ್ತಿ ಕೈಮುಗಿದಳು.
"ಧನ್ಯ, ಧನ್ಯ” ಎಂದರು ಸಿದ್ಧವೀರದೇವರು.
ಬಳಿಕ ರುದ್ರಮುನಿಗಳು ಅಮ್ಮನವರಿಗೆ ಗೊತ್ತಿದ್ದ ಮಹಾನುಭಾವಿಗಳು, ಶರಣರು ಯಾರುಯಾರು ಎಲ್ಲಿದ್ದಾರೆ? ಯಾರು ಬಯಲಾಗಿದ್ದಾರೆ ಎಂಬದನ್ನು ತಮಗೆ ಗೊತ್ತಿದ್ದಷ್ಟು ಹೇಳಿದರು. ಮಧ್ಯಾಹ್ನದ ಸ್ನಾನಶಿವಾರ್ಚನೆಗಳು ನಡೆದವು. ಅಂದು ನಾಗಮ್ಮ ಸಂಭ್ರಮದಿಂದ ಗುರುಲಿಂಗಜಂಗಮದ ಪಾದೋದಕ ಪ್ರಸಾದ ಪಡೆದು ಪರಮಾನಂದಭರಿತಳಾದಳು. ಆ ಶರಣೆ ಬಾಹ್ಯ ಪ್ರಜ್ಞೆಯಿಂದ ವೀರಶೈವ ಪ್ರಕ್ರಿಯೆ ನಡಿಸುತ್ತಿರುವದು ಬಹುಶಃ ಇದೇ ಕೊನೆಯದಾಯಿತು.
ಶ್ರೀಗಳಿಬ್ಬರೂ ಅಂದು ಸಾಯಂಕಾಲ ಮಹೇಶ್ವರ ಹಳ್ಳಿಗೆ ಮರಳಿದರು. ಇಲ್ಲಿಗೆ ನಾಗಮ್ಮನ ಧೈಯ ಪೂರೈಸಿದಂತಾಗಿತ್ತು. ಮಣಿಹ ಮುಗಿದಂತಾಗಿತ್ತು. ಸಫಲ ಕ್ರಿಯೆಯ ಪರಿಣಾಮವನ್ನು ಪರಶಿವನಿಗೆ ಅರ್ಪಿಸಿ ಆ ಆನಂದದಲ್ಲಿ ಬೆರೆದು ತನ್ನನ್ನು ತಾನು ಮರೆತು ಬಿಟ್ಟಳು. ಬರಬರುತ್ತ ವ್ಯಾವಹಾರಿಕ ಅರಿವು ಆರಗಿದೋಯಿತು. ವೃತ್ತಿ ಅಂತರ್ಮುಖವಾಯಿತು. ಮಾತು, ಕೃತಿ, ನಗೆ, ಕರಚರಣಗಳ ಚಲನ ಇವೆಲ್ಲ ಹೊರಗಿನ ಸಂಗತಿಗಳಿಗೆ ಸಂಬಂಧಿಸಿರಲೇ ಇಲ್ಲ. ಎಲ್ಲರನ್ನೂ ಶಿವ, ಬಸವ, ಎಂದೇ ಸಂಬೋಧಿಸುವಳು. ಹೀಗೆ ಲೀಲಾಮಯವಾಗಿಯೂ ಕೆಲವು ತಿಂಗಳು ಬದುಕಿದ್ದಳು. ಗೌರಮ್ಮ, ಗಿರಿಯಮ್ಮ, ಚಂದ್ರಮ್ಮ, ಮುತ್ತಜ್ಜಿ ಶರಣೆಯರು ಆ ಶಿವಯೋಗಿಣಿಯ ಜೋಪಾನ ಮಾಡುತ್ತಿದ್ದರು. ಪೂಜಾದಿಗಳನ್ನು ಮಾಡಿಸುತ್ತಿದ್ದರು. ಕರಣಗಳಡಗಿದ ದೇಹ ಉಳಿಯುವದೇಷ್ಟು ದಿನ ? ಒಮ್ಮೆ ಮಹಾ ಶಿವಯೋಗಿಣಿಯ ಆ ಬಯಲಭಾವ ಸೀಮಾತೀತವಾದ ಬಯಲಲ್ಲಿ ಬೆರೆಯಿತು. (ಕ್ರಿ. ವ. ಸುಮಾರು ೧೧೮೦).
ಸಿದ್ಧವೀರ ದೇಶಿಕರ ನೇತೃತ್ವದಲ್ಲಿ ಆ ಶರೀರಕ್ಕೆ ಸಮಾಧಿಯಾಯಿತು. ಅದನ್ನು ಈಗಲೂ ಅಲ್ಲಿ ಕಾಣಬಹುದು. ಆ ಆಶ್ರಮ-ದಾಸೋಹಮಠಗಳು ಕಾಲಗರ್ಭದಲ್ಲಿ ಕರಗಿ ಹೋಗಿವೆ. ಚಂದಯ್ಯ ಅಲ್ಲಿಂದ ಏಳೆಂಟುಮೈಲು ದೂರವಾಗಿದ್ದ ನಂದೀಹಳ್ಳಿಯಲ್ಲಿ ಕೆಲವು ದಿವಸ ಇದ್ದು ಬಯಲಾದನೆಂದು ಹೇಳುತ್ತಾರೆ.
ಅಕ್ಕನಾಗಮ್ಮನ ದಿವ್ಯಜೀವನ ಮುಕ್ತಾಯವಾಯಿತು. ಕ್ರಾಂತಿದೂತರು ಹುಟ್ಟುವ ಮೊದಲೇ ಹುಟ್ಟಿ, ಕ್ರಾಂತಿ ಕೈಗೂಡಿ ಕೊನೆಗೊಂಡ ಮೇಲೆಯೂ ಬಾಳಿ, ಕ್ರಿಯಾಸಿದ್ಧಿಯ ಮಹದಾನಂದದಲ್ಲಿ ಬೆರೆದ ಅಕ್ಕನಾಗಮ್ಮನ ಹೆಸರು ಚಿರಸ್ಥಾಯಿಯಾಗಿದೆ.
ಕ್ರಾಂತಿಗಂಗೋತ್ರಿ ಓದಲು ಇಲ್ಲಿ ಕ್ಲಿಕ್ ಮಾಡಿ